ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
1.ಬೆಳೆಯುವ ಸಿರಿ ಮೊಳಕೆಯಲ್ಲಿ.
ಗಾದೆಗಳು ನಮ್ಮ ಭಾಷೆಯಲ್ಲಿರುವ ನುಡಿಮುತ್ತುಗಳು. ನಮ್ಮ ಪೂರ್ವಜರು ತಮ್ಮ ಅನುಭವಗಳನ್ನು ಹಿಡಿದಿಟ್ಟ ಪುಟ್ಟ ಕಿರು ನುಡಿಗಳೆ ಗಾದೆಗಳು. ಪ್ರಸ್ತುತ ಗಾದೆಯು, ಕನ್ನಡ ನಾಡಿನಲ್ಲಿ ಜನಪ್ರಿಯವಾಗಿರುವ ಗಾದೆ ಮಾತುಗಳಲ್ಲಿ ಒಂದಾಗಿದೆ.
ಯಾವುದೇ ಒಂದು ಬೀಜ ಒಡೆದು ಮೊಳಕೆ ಬರುತ್ತಿದ್ದರೆ, ಅದನ್ನು ನೋಡಿದ ಕೂಡಲೇ, ಎಂತಹ ಗಿಡ ಹುಟ್ಟಬಹುದು, ಎಂಬುದು ತಿಳಿಯುತ್ತದೆ. ಅದು , ಉಪಯುಕ್ತವಾದದ್ದು ಅಥವಾ ನಿಷ್ಪ್ರಯೋಜಕವಾದದ್ದು ಎಂಬುದು ಆಗಲೇ ಗೊತ್ತಾಗುತ್ತದೆ. ಅದು ವಿಷದ ಅಥವಾ ಮುಳ್ಳಿನ ಗಿಡವಾಗಿದ್ದರೆ ಅದನ್ನು ಮೊಳಕೆಯಲ್ಲಿ ಚಿವುಟಿ ಬಿಡಬಹುದು. ಇದರ ಹೋಲಿಕೆಯನ್ನು ನಮ್ಮ ಹಿರಿಯರು ಬೆಳೆಯುತ್ತಿರುವ ಮಕ್ಕಳಿಗೆ ಹೋಲಿಸಿದ್ದಾರೆ. “ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ” ಎನ್ನುವಂತೆ ಮಗು ಮುಂದೆ ಏನಾಗುವುದು ಎಂಬುದು ಅದರ ಬಾಲ್ಯದಲ್ಲಿಯೇ ತಿಳಿಯುತ್ತದೆ. ಚಿಕ್ಕವರಿದ್ದಾಗಲೇ ಅವರ ಆಸಕ್ತಿ ಯಾವುದರಲ್ಲಿದೆ? ಎಂಬುದನ್ನು ಗುರುತಿಸಬೇಕು. ಹಾಗೆಯೇ ಅದು ಅವರ ಏಳಿಗೆಗೆ ಪೂರಕವೋ ಮಾರಕವೋ ಎಂಬುದನ್ನು ತಿಳಿದರೆ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬಹುದು. ಉದಾಹರಣೆಗೆ ನರೇಂದ್ರ ಎಂಬ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಅತ್ಯಂತ ಜಾಣನು, ಪ್ರತಿಭಾವಂತನು ಆಗಿದ್ದನು. ಅವನು ಮುಂದೆ ದೊಡ್ಡ ಮೇಧಾವಿ ಆಗುವನೆಂದು ಎಲ್ಲರೂ ಹೇಳುತ್ತಿದ್ದರು. ಅಂತೆಯೇ ಅವನು ಮುಂದೆ ದೊಡ್ಡವನಾಗಿ ಸ್ವಾಮಿ ವಿವೇಕಾನಂದನಾಗಿ ಭಾರತದ ಕೀರ್ತಿಯನ್ನು ಬೆಳಗಿಸಿದ. ಒಂದು ವೇಳೆ ಮಗು ಚಿಕ್ಕಂದಿನಲ್ಲಿ ದಾರಿ ತಪ್ಪುತ್ತಿದ್ದರೆ, ಆಗಲೇ ಅದನ್ನು ತಿದ್ದಿ, ಸರಿದಾರಿಗೆ ತರಬೇಕು. ಚಿಕ್ಕಂದಿನಲ್ಲಿ ತಿದ್ದದೇ ಹೋದರೆ, ದೊಡ್ಡವರಾದ ಮೇಲೆ ತಿದ್ದಲು ಸಾಧ್ಯವಿಲ್ಲ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ”.
ಒಟ್ಟಿನಲ್ಲಿ ಬೆಳೆಯುವ ಮಕ್ಕಳ ನಡತೆಯನ್ನು ಗುರುತಿಸುವುದು, ಪೋಷಕರು ಮತ್ತು ಶಿಕ್ಷಕರ ಮುಖ್ಯ ಜವಾಬ್ದಾರಿ ಮಕ್ಕಳ ಭವಿಷ್ಯ ರೂಪಿಸಲು ಇದೇ ಸರಿಯಾದ ಸಮಯ ಎಂಬುದು ಗಾದೆಯ ಒಳಾರ್ಥ.
2. ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು.
ಗಾದೆ ಮಾತುಗಳು, ನಮ್ಮ ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಗಳ ಮಹತ್ವವನ್ನು ಸಾರುತ್ತದೆ. ಆಕಾರದಲ್ಲಿ ವಾಮನನಾದರು ಅರ್ಥದಲ್ಲಿ ತ್ರಿವಿಕ್ರಮನಂತಿರುವ ಈ ಗಾದೆಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗಿವೆ.
ಪ್ರಸ್ತುತ ಗಾದೆಯು ಮನುಷ್ಯನು ತನ್ನ ಜೀವನದಲ್ಲಿ, ಗೌರವವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ತಿಳಿಸುತ್ತದೆ. ಯಾವುದೇ ವ್ಯಕ್ತಿಗಾಗಲಿ, ತನ್ನದೇ ಆದ ಒಂದು ಗೌರವವಿರುತ್ತದೆ. ಅದು ಅವನ ಗುಣ ಸ್ವಭಾವ ವ್ಯಕ್ತಿತ್ವದ ಮೇಲೆ ನಿರ್ಧರಿತವಾಗುತ್ತದೆ. ಸಮಾಜದಲ್ಲಿ ತಲೆಯೆತ್ತಿ ಬಾಳಬೇಕೆಂದರೆ ತನ್ನ ಮಾನವನ್ನು ಕಾಪಾಡಿಕೊಳ್ಳಬೇಕಾದದ್ದು ತುಂಬಾ ಮುಖ್ಯ. ಮಾನ ಹೋಗುವಂತಹ ಯಾವುದೇ ಒಂದು ಸಣ್ಣ ತಪ್ಪನ್ನು ಮಾಡಿದರೆ ಮುಂದೆ ಬಹಳ ಪರಿತಪಿಸಬೇಕಾಗುತ್ತದೆ. ಜನರು ಯಾವುದೋ ಒಂದು ಸಣ್ಣ ತಪ್ಪನ್ನು ಮಾಡುತ್ತಾರೆ. ಬಳಿಕ ಅದನ್ನು ಸರಿಪಡಿಸಲು ನಾನಾ ರೀತಿಯಲ್ಲಿ ಒದ್ದಾಡುತ್ತಾರೆ. ಮಿಂಚಿಹೋದ ಮಾತಿಗೆ, ಚಿಂತಿಸಿ ಫಲವಿಲ್ಲ ಎಂಬಂತೆ ಒಂದು ಚಿಕ್ಕ ಅಡಿಕೆಯನ್ನು ಕದ್ದರೆ ಹೋಗುವ ಮಾನವು ನಂತರ ಒಂದು ಆನೆಯನ್ನೇ ಕೊಟ್ಟರು ಮರಳಿ ಬರುವುದಿಲ್ಲ. ಆದ್ದರಿಂದ ನಾವು ಬಹಳ ಎಚ್ಚರಿಕೆಯಿಂದ ನಮ್ಮ ಗೌರವವನ್ನು ಕಾಪಾಡಿಕೊಂಡು ಹೋಗಬೇಕು. ಸಮಾಜದಲ್ಲಿ ಒಳ್ಳೆಯವರು ಎನಿಸಿಕೊಳ್ಳಲು ಬಹಳ ಸಮಯ ಬೇಕು. ಆದರೆ ಕೆಟ್ಟವರಾಗಲು ಒಂದರಗಳಿಗೆ ಸಾಕು. “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ನಾವು ಹತ್ತು ಒಳ್ಳೆಯ ಕೆಲಸ ಮಾಡಿದರು ನಾವು ಮಾಡುವ ಒಂದು ತಪ್ಪು, ಸಮಾಜದಲ್ಲಿ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಚಾರಿತ್ರ್ಯ ಶುದ್ದಿಯು ಮಾನವನ ಜೀವನದಲ್ಲಿ ಬಹು ಮುಖ್ಯ. ಮಾನ ಹೋದರೆ ಪ್ರಾಣ ಹೋದಂತೆ ಎನ್ನುವ ಅರ್ಥವನ್ನು ಈ ಗಾದೆಯು ಧ್ವನಿಸುತ್ತದೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
3. ಆಳಾಗಿ ದುಡಿ, ಅರಸಾಗಿ ಉಣ್ಣು
ಕನ್ನಡ ಭಾಷಾ ಸಾಹಿತ್ಯದಲ್ಲಿ ಗಾದೆ ಮಾತುಗಳು ಮಹತ್ವದ ಸ್ಥಾನವನ್ನು ಪಡೆದಿವೆ. ಪೂರ್ವಜರ ಜೀವನ ಜೀವನಾನುಭವಗಳು ಸಾಂದೀಕರಣಗೊಂಡು, ರೂಪದಲ್ಲಿ ಚಿಕ್ಕ ಹಾಗೂ ಅರ್ಥದಲ್ಲಿ ಅಗಾಧವಾಗಿರುವ ಗಾದೆಗಳು ರಚನೆಯಾಗಿವೆ. ಅಂತಹ ಸಾವಿರಾರು ಗಾದೆಗಳಲ್ಲಿ ಪ್ರಸ್ತುತ ಗಾದೆಯು ಒಂದಾಗಿದ್ದು, ದುಡಿಮೆಯ ಮಹತ್ವವನ್ನು ಸಾರುತ್ತದೆ.
“ಕಾಯಕವೇ ಕೈಲಾಸ” ಎಂದು ಘೋಷಿಸುವ ಮೂಲಕ ಬಸವಣ್ಣನವರು 12ನೇ ಶತಮಾನದಲ್ಲಿಯೇ ದುಡಿಮೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಪ್ರತಿಯೊಬ್ಬರು ಒಂದಲ್ಲ ಒಂದು ಕಾಯಕವನ್ನು ಮಾಡಲೇಬೇಕು. ದುಡಿಯದೆ ಉಣ್ಣುವ ಹಕ್ಕು ಈ ಭೂಮಿಯ ಮೇಲೆ ಯಾರಿಗೂ ಇಲ್ಲ. ಪ್ರತಿಯೊಬ್ಬರೂ ತಮಗೆ ಇಷ್ಟವಾದ, ಸಾಧ್ಯವಾದ ವೃತ್ತಿಯನ್ನು ಆಯ್ದುಕೊಂಡು ಅದನ್ನು ನಿಷ್ಠೆಯಿಂದ ಮಾಡಬೇಕು. ಅದರಿಂದ ಬರುವ ಆದಾಯದಿಂದ ಊಟ ಮಾಡಬೇಕು. ದುಡಿದು ತಿನ್ನುವ ಅನ್ನಕ್ಕೆ ಇರುವ ಬೆಲೆ ಅಮೂಲ್ಯವಾದದ್ದು. ದುಡಿಯುವಾಗ ಆಳಿನಂತೆ ಕಷ್ಟಪಟ್ಟು ನಿಷ್ಠೆಯಿಂದ ದುಡಿದರೆ ಅರಸನಂತೆ ಕುಳಿತು ಯಾರ ಹಂಗು ಇಲ್ಲದೆ ಸ್ವಾಭಿಮಾನದಿಂದ ನೆಮ್ಮದಿಯಿಂದ ಊಟ ಮಾಡಬಹುದು.
ಶ್ರಮಪಟ್ಟು ದುಡಿಯದೇ ಬೇರೊಬ್ಬರ ಹಣಕ್ಕಾಗಿ ಆಸೆ ಪಟ್ಟರೆ ಅಥವಾ ಮೋಸ ಮಾಡಿ ಹಣ ಗಳಿಸಿದರೆ ಅದರಿಂದ ನಾವು ಎಂದಿಗೂ ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಿಲ್ಲ. ನಾವು ಪ್ರತಿದಿನವೂ ಊಟ ಮಾಡುವಾಗ ಈ ಅನ್ನವು ಬಂದಿರುವುದು ನನ್ನ ದುಡಿಮೆಯ ಬೆವರಿನಲ್ಲಿಯೇ ಅಥವಾ ಇನ್ನೊಬ್ಬರ ಕಣ್ಣೀರಿನಿಂದಲೂ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು ನಮ್ಮ ದುಡಿತದ ಬೆವರಿನಿಂದ ಬಂದ ಅನ್ನವೇ ಶ್ರೇಷ್ಠವಾದದ್ದು.ಇನ್ನೊಬ್ಬರ ಕಣ್ಣೀರಿನಿಂದ ಬಂದ ಅನ್ನವು ಎಂದಿಗೂ ನಮ್ಮ ಮೈಯಿಗೆ ಹತ್ತಲಾರದು.
4. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
ಜನಪದರ ನಾಲಿಗೆಯಲ್ಲಿ ನಲಿದಾಡುವ ಗಾದೆ ಮಾತುಗಳು ಹುಟ್ಟಿದ್ದು, ಅವರ ಅಪಾರ ಅನುಭವದಿಂದ. ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಪ್ರಾಚೀನ ಕಾಲದಿಂದಲೂ ಜೀವಂತವಾಗಿರುವ ಈ ಜಾಣನುಡಿಗಳು ಮೌಖಿಕ ಸಾಹಿತ್ಯದ ಪ್ರಮುಖ ಭಾಗವಾಗಿದೆ, ಪ್ರಸ್ತುತ ಗಾದೆಯು ಹಳ್ಳಿಗಳಲ್ಲಿ ಪ್ರಚಲಿತವಾಗಿದ್ದು, ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಮೇಟಿ ಎಂಬುದು ಹುಲ್ಲು ತುಳಿಸುವ ಕಣದಲ್ಲಿರುವ ಒಂದು ಸಾಧನ. ಮೇಟಿಯನ್ನು ಕಣದ ಮಧ್ಯ ಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಕಟ್ಟಿರುವ ದನಗಳನ್ನು ತಿರುಗಿಸುತ್ತಾರೆ. ಈ ರೀತಿ ದನಗಳ ಕಾಲ್ತುಳಿತಕ್ಕೆ ಸಿಲುಕಿದ ರಾಗಿಯು ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ, ರಾಗಿ ತುಳಿಸುವ ಈ ದೃಶ್ಯವನ್ನು ರೈತರು, ಸುಗ್ಗಿಯ ಕಾಲದಲ್ಲಿ, ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು. ಹಾಗಾಗಿ ಮೇಟಿ ವಿದ್ಯೆ ಎಂದರೆ, ಬೇಸಾಯ ಎಂದು ತಿಳಿಯಬೇಕು.
ಮನುಷ್ಯನಿಗೆ ಜೀವನ ನಡೆಸಲು ಅನುವಾಗುವ ಹಲವಾರು ವಿದ್ಯೆಗಳಿವೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ೬೪ ಪ್ರಮುಖ ವಿದ್ಯೆಗಳನ್ನು ಉಲ್ಲೇಖಿಸಲಾಗಿದೆ, ಆದರೆ ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲಿ ಸಾವಿರಾರು ಹೊಸ ಹೊಸ ವಿದ್ಯೆಗಳು ಹುಟ್ಟಿಕೊಂಡಿವೆ. ಜನರು, ಜೀವನೋಪಾಯಕ್ಕಾಗಿ ತಮಗೆ ಇಷ್ಟವಿರುವ ವಿದ್ಯೆಗಳನ್ನು ಕಲಿತು, ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಾರೆ. ಆದರೆ ಕೆಲವು ವಿದ್ಯೆಗಳು, ಕಾಲ ಬದಲಾದಂತೆ ತಮ್ಮ ಮಹತ್ವವನ್ನು ಕಳೆದುಕೊಳ್ಳಬಹುದು. ಆದರೆ ಸದಾಕಾಲಕ್ಕೂ ಶ್ರೇಷ್ಠವಾದ ಯಾವ ಕಾಲಕ್ಕೂ ತನ್ನ ಮೌಲ್ಯವನ್ನು ಕಳೆದುಕೊಳ್ಳದ ವಿದ್ಯೆ ಎಂದರೆ ಅದು ವ್ಯವಸಾಯ. ಏಕೆಂದರೆ ಮನುಷ್ಯ ಇರುವವರೆಗೂ ತಿನ್ನಲು ಆಹಾರ ಬೇಕೇ ಬೇಕು, ಆಹಾರ ಬೆಳೆಯಲು, ಬೇಸಾಯ ಬೇಕೆ ಬೇಕು.ಯಾವ ಕೆಲಸಗಳು ನಿಂತರು, ಇದು ಮಾತ್ರ ನಿಲ್ಲುವಂತಿಲ್ಲ. ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ನೇಗಿಲಯೋಗಿಯ ಕಾರ್ಯ ಮಾತ್ರ ಎಂದು ನಿಲ್ಲದು. ರೈತನು ಭೂಮಿ ತಾಯಿಯನ್ನು ನಂಬುತ್ತಾನೆ ಈ ಭೂಮಿ ತಾಯಿಯು ನಂಬಿದವರ ಕೈ ಎಂದಿಗೂ ಬಿಡುವುದಿಲ್ಲ ಆದ್ದರಿಂದ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಅನುಭವಿಗಳು ಹೇಳಿದ್ದಾರೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
5. ಹಾಸಿಗೆ ಇದ್ದಷ್ಟು ಕಾಲು ಚಾಚು.
ಗಾದೆಗಳಿಲ್ಲದ ದೇಶವಾಗಲಿ, ಭಾಷೆಯಾಗಲಿ ಇಲ್ಲವೇ ಇಲ್ಲ ಗಾದೆಗಳನ್ನು ಬಳಸದ ಮನುಷ್ಯನಿಲ್ಲ. ಊಟಕ್ಕೆ ಉಪ್ಪು ಹೇಗೆ ಅಗತ್ಯವೋ ಹಾಗೆ ಗಾದೆಗಳು ಮಾತಿಗೆ ಅವಶ್ಯಕ. ಗಾದೆಗಳು ವಸ್ತು ವೈವಿಧ್ಯತೆಯಿಂದ ಕೂಡಿದ್ದು ಜನಸಾಮಾನ್ಯರ ಅನುಭವದ ನುಡಿಗಳಾಗಿವೆ..ಸಂಸ್ಕೃತಿ, ಸಂಪನ್ನತೆ ಹಾಗೂ ವಿಚಾರ ವೈಭವಕ್ಕೆ ಹೆಸರಾಗಿದೆ.
ನಾಲ್ಕು ಪದಗಳಿಂದ ಕೂಡಿದ ಈ ಗಾದೆಯಲ್ಲಿ ‘ಹಾಸಿಗೆಯ ಅಳತೆ’ ಮತ್ತು ‘ಕಾಲು ಚಾಚುವಿಕೆ’ ಎಂಬ ಎರಡು ರೂಪಕಗಳಿವೆ. ಹಾಸಿಗೆ ಇದ್ದಷ್ಟು ಎನ್ನುವುದು ನಮ್ಮ ಸಾಮರ್ಥ್ಯವನ್ನು ನಮಗಿರುವ ಮಿತಿಯನ್ನು ದುಡಿದು, ಗಳಿಸಬಹುದಾದ ಸಂಪತ್ತನ್ನು ಸೂಚಿಸುತ್ತದೆ. ಕಾಲು ಚಾಚುವುದು ಮಿತಿಮೀರದಂತೆ ವ್ಯವಹರಿಸಬೇಕೆಂಬುದನ್ನು ತಿಳಿಸುತ್ತದೆ, ಗಳಿಸಿಟ್ಟ ಅಥವಾ ಗಳಿಸಬಹುದಾದ ಧನ, ಕನಕ, ಸಂಪತ್ತಿನ ವಿತಿಯನ್ನು ಮೀರಿ ದುಂದುಗಾರಿಕೆಯನ್ನು ಮಾಡಬಾರದು ಎಂಬ ಎಚ್ಚರಿಕೆಯ ಧ್ವನಿಯನ್ನು ಈ ಗಾದೆಯಲ್ಲಿ ಕಾಣಬಹುದು. ನಮ್ಮ ನಮ್ಮ ಮಿತಿಯೊಳಗೆ ಜೀವನ ಮಾಡುವುದನ್ನು ಕಲಿಯಬೇಕೆಂಬ ಕಿವಿಮಾತನ್ನು ಈ ಗಾದೆ ಹೇಳುತ್ತದೆ.
ನಮ್ಮ ದುಡಿಮೆ ನಮ್ಮ ಖರ್ಚಿಗಿಂತ ಅಧಿಕವಾಗಿರಬೇಕು. ಸಂಪಾದನೆಗಿಂತ ಅಧಿಕ ಖರ್ಚು ಮಾಡಿದರೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ನಮ್ಮ ಹಿರಿಯರು ಇರುವಷ್ಟರಲ್ಲಿ ನೆಮ್ಮದಿಯಾಗಿರುವುದನ್ನು ಕಲಿಯುವ ಜೀವನ ಪಾಠವನ್ನು ನಮಗೆ ಹೇಳುತ್ತಾ ಬಂದಿದ್ದಾರೆ. ನಮ್ಮ ಆದಾಯಕ್ಕೆ ತಕ್ಕಂತೆ ನಮ್ಮ ಖರ್ಚಿರಬೇಕೇ ಹೊರತು ಬೇಕಾಬಿಟ್ಟಿಯಾಗಿ ಮನಬಂದಂತೆ ದುಂದುಗಾರಿಕೆ ಮಾಡುವುದಲ್ಲ. ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇದೆಯೋ ಅಷ್ಟು ಉದ್ದಕ್ಕೆ ಕಾಲು ಚಾಚಬೇಕು ಹೊರತು ಅದರಿಂದಾಚೆಗೆ ಕಾಲು ಚಾಚ ಬಾರದು. ಹಾಸಿಗೆಯ ಮೇಲೆ ಮಲಗುವುದು ಆಯಾಸದ ಪರಿಹಾರಕ್ಕಾಗಿ, ಸುಖವಾಗಿ ನಿದ್ದಿಸುವುದಕ್ಕಾಗಿ, ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ, ಹಾಸಿಗೆ ಮೀರಿ ಕಾಲು ಚಾಚುವುದು ಅಪಾಯಕರ ಕಾಲು ನೆಲಕ್ಕೆ ಹೋಗುತ್ತದೆ ನೆಲದ ಶೀತ ಮೈಗೇರುತ್ತದೆ ಆರೋಗ್ಯ ವ್ಯತ್ಯಾಸವಾಗುತ್ತದೆ.
ಆಡಂಬರದ ಬಾಳಿಗೆ ಬಲಿಯಾಗಿ, ಸಂಕಷ್ಟವನ್ನು ನಾವೇ ಸ್ವಾಗತಿಸಬಾರದು. ತೃಪ್ತಿಕರವಾದ ಆರೋಗ್ಯಕರವಾದ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು. ಅತಿ ಆಸೆ ಗತಿಗೇಡಿಸುತ್ತದೆ, ಗೌತಮ ಬುದ್ಧ ಹೇಳಿರುವಂತೆ “ಆಸೆಯೇ ದುಃಖಕ್ಕೆ ಮೂಲ”, ಸಾಲ ಮಾಡಿ ತುಪ್ಪ ತಿನ್ನುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಹಿರಿಯರು ತಮ್ಮ ಅನುಭವದಿಂದ ತಮ್ಮ ಮುಂದಿನ ಪೀಳಿಗೆಯನ್ನು ಈ ಗಾದೆಯ ಮೂಲಕ ಎಚ್ಚರಿಸಿದ್ದಾರೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
6. ದೇಶ ಸುತ್ತಬೇಕು, ಕೋಶ ಓದಬೇಕು
ಗಾದೆಗಳು, ವೇದಗಳಿಗೆ ಸಮ ಎನ್ನುತ್ತಾರೆ. ಚಿಕ್ಕವಾಗಿದ್ದರೂ ಅಪಾರವಾದ ಅರ್ಥವನ್ನು ಹುದುಗಿಸಿ ಇಟ್ಟುಕೊಂಡಿರುವ ಗಾದೆಗಳು, ನಮ್ಮ ಭಾಷೆಯ ಸೊಬಗನ್ನು ಹೆಚ್ಚಿಸಿವೆ. ಪ್ರಸ್ತುತ ಗಾದೆಯು ನಮ್ಮ ನಾಡಿನಲ್ಲಿ ಅತ್ಯಂತ ಜನಜನಿತವಾದ ಗಾದೆ ಮಾತಾಗಿದೆ.
“ನಹೀ ಜ್ಞಾನೇನ ಸದೃಶಂ”ಎಂದರೆ ಜ್ಞಾನಕ್ಕೆ ಸಮಾನವಾದದು ಯಾವುದು ಇಲ್ಲ. ಆದ್ದರಿಂದ ನಾವು ಸದಾ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿ ಇರಬೇಕು, ಇದಕ್ಕೆ ಇರುವ ಎರಡು ಅತಿ ಮುಖ್ಯವಾದ ಮಾರ್ಗಗಳೆಂದರೆ ಒಂದು ದೇಶ ಸುತ್ತುವುದು ಅಂದರೆ ಪ್ರವಾಸ ಮಾಡುವುದು, ಮತ್ತೊಂದು ಕೋಶ ಓದುವುದು, ಅಂದರೆ ಪುಸ್ತಕಗಳ ಅಧ್ಯಯನ.
ಪುಸ್ತಕಗಳು, ಜ್ಞಾನದ ಆಗರಗಳು,ಜಗತ್ತಿನಲ್ಲಿನ ಎಲ್ಲಾ ಜ್ಞಾನವು ಪುಸ್ತಕಗಳಲ್ಲಿ ಅಡಕವಾಗಿದೆ, ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಂದು ಒಳ್ಳೆಯ ಪುಸ್ತಕ 10, ಗೆಳೆಯರಿಗೆ ಸಮವಂತೆ. ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದಂತೆ ನಮ್ಮ ಜ್ಞಾನದ ಹರವು ಹೆಚ್ಚುತ್ತಾ ನಮ್ಮ ಅನುಭವವು ಹೆಚ್ಚಾಗುತ್ತಾ ಹೋಗುತ್ತದೆ.
ಅದೇ ರೀತಿ ಜ್ಞಾನ ಸಂಪಾದಿಸುವ ಮತ್ತೊಂದು ಮಾರ್ಗವೆಂದರೆ ಪ್ರವಾಸ ಮಾಡುವುದು. ಒಂದು ಪ್ರದೇಶದ ಬಗ್ಗೆ ತಿಳಿದುಕೊಳ್ಳಬೇಕಾದರೆ, ನಾವು ಖುದ್ದಾಗಿ ಆ ಪ್ರದೇಶವನ್ನು ಸಂದರ್ಶಿಸಬೇಕು. ಇದರಿಂದ ಅಲ್ಲಿನ ಪರಿಸರ, ಹವಾಮಾನ, ಜನಜೀವನ, ಭಾಷೆ, ಸಂಸ್ಕೃತಿ, ಸಾಮಾಜಿಕ ಆರ್ಥಿಕ ಪರಿಸ್ಥಿತಿ ಜೀವವೈವಿಧ್ಯ ಹೀಗೆ ಹತ್ತು ಹಲವು ವಿಷಯಗಳು ನಮಗೆ ಅರಿವಾಗುತ್ತದೆ. ಉದಾಹರಣೆಗೆ ಮರುಭೂಮಿಯ ಬಗ್ಗೆ ನಾವು ತಿಳಿಯಬೇಕಾದರೆ ಪುಸ್ತಕದಲ್ಲಿ ಅದರ ವಿವರಣೆ ಓದುವುದಕ್ಕಿಂತಲೂ ಟಿವಿಯಲ್ಲಿ ಅದನ್ನು ನೋಡುವುದಕ್ಕಿಂತಲೂ ಖುದ್ದಾಗಿ ಅಲ್ಲಿಗೆ ಭೇಟಿ ನೀಡಿದಾಗ ನಮಗೆ ಅದರ ನಿಜವಾದ ಕಲ್ಪನೆ ಸ್ಪಷ್ಟ ಚಿತ್ರಣ ಮೂಡಲು ಸಾಧ್ಯ. ಆದ್ದರಿಂದ ದೇಶ ಸುತ್ತೋಣ, ಕೋಶ ಓದೋಣ ಜ್ಞಾನವನ್ನು ವಿಸ್ತರಿಸಿಕೊಳ್ಳೋಣ.
7. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು.
ಗಾದೆ ಮಾತುಗಳು, ನಮ್ಮ ಹಿರಿಯರು ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳು. ಗಾತ್ರದಲ್ಲಿ ಅಲ್ಪವಾಗಿದ್ದರೂ ಅರ್ಥದಲ್ಲಿ ಅಗಾಧವಾಗಿರುವ ಗಾದೆಗಳು, ಜೀವನದಲ್ಲಿ ನಮ್ಮನ್ನು ತಿದ್ದಿ ಮುನ್ನಡೆಸುವ ದಾರಿದೀಪಗಳಾಗಿವೆ. ಅಂತಹ ಅಸಂಖ್ಯ ಗಾದೆಗಳಲ್ಲಿ ಪ್ರಸ್ತುತ ಗಾದೆಯು ಒಂದು.
ಈ ಗಾದೆಯು ವೇಗದ ಪ್ರಪಂಚದಲ್ಲಿ ಸಾಗುತ್ತಿರುವ ನಮ್ಮ ಜೀವನಕ್ಕೆ ಬಹಳ ಒಪ್ಪುವಂತಹದ್ದು. ಬದಲಾಗುತ್ತಿರುವ ನಮ್ಮ ಜೀವನಶೈಲಿ ಯಾವುದೇ ವಿಷಯವನ್ನಾದರೂ ಪ್ರಮಾಣಿಸಿ ನೋಡುವಷ್ಟು, ತಾಳ್ಮೆಯನ್ನು ನಮ್ಮಿಂದ ಕಸಿದುಕೊಂಡಿದೆ. ನಮ್ಮ ಕಣ್ಣಿಗೆ ಕಂಡದ್ದು ಕಿವಿಗೆ ಕೇಳಿದ್ದೆ ಸತ್ಯ ಎಂದು ನಂಬಿ ಬಿಡುತ್ತೇವೆ ಮನೆ, ಕುಟುಂಬ, ಸ್ನೇಹಿತರಲ್ಲಿ ಇಂತಹ ಗುಣದಿಂದ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಬೇರೆಯವರ ಮಾತನ್ನು ಕೇಳಿ ನಮ್ಮವರ ಮೇಲೆ ಅನುಮಾನ ಪಟ್ಟು ಅವರನ್ನೇ ತಪ್ಪಿತಸ್ಥರನ್ನಾಗಿಸುವುದು ಎಷ್ಟು ಸರಿ? ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರಲಾರದು ಎಂಬ ಮಾತಿನಂತೆ ಮುರಿದು ಬಿದ್ದ ಸಂಬಂಧಗಳು ಮತ್ತೆ ಸುಲಭವಾಗಿ ಚಿಗುರಲಾರವು. ಆದ್ದರಿಂದ ಯಾವುದೇ ವಿಷಯದ ಬಗ್ಗೆ ಆತುರದ ತೀರ್ಮಾನ ಕೈಗೊಳ್ಳಬಾರದು ಕಣ್ಣಾರೆ ಕಂಡರು ಸಹ ಮತ್ತೊಮ್ಮೆ ದೃಢಪಡಿಸಿಕೊಳ್ಳುವುದು ಒಳ್ಳೆಯದು ಏಕೆಂದರೆ ನಮ್ಮ ಕಣ್ಣು, ಕಿವಿಗಳೇ ನಮಗೆ ಕೆಲವೊಮ್ಮೆ ಮೋಸ ಮಾಡುತ್ತದೆ.
ನಮಗೆಲ್ಲರಿಗೂ ತಿಳಿದಿರುವ ಹಾವು ಮುಂಗಸಿಯ ಕಥೆಯು ಈ ಗಾದೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. “ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಅಲ್ಲವೇ”? ನಮ್ಮ ಅವಸರದ ನಿರ್ಧಾರಗಳಿಂದ ಆಗುವ ಅನಾಹುತಗಳಿಗೆ ಮುಂದೆ ನಾವೇ ಪಶ್ಚಾತಾಪ ಪಡಬೇಕಾಗುತ್ತದೆ, ಆದ್ದರಿಂದ ಜೀವನದಲ್ಲಿ ತಾಳ್ಮೆ, ಸಹನೆ ಬಹಳ ಮುಖ್ಯ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
8. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ.
ಗಾದೆಗಳು ಕನ್ನಡ ಜನಪದ ಸಾಹಿತ್ಯದ ಬಹುಮುಖ್ಯ ಪ್ರಕಾರಗಳಲ್ಲೊಂದು, ಗಾದೆ ಎಂಬ ಪದ ಸಂಸ್ಕೃತದ ‘ಗಾಥಾ’ ಪದದ ತದ್ಭವ ರೂಪ. ಗಾದೆಗೆ ಸಂವಾದಿಯಾಗಿ ಸೂಕ್ತಿ ಲೋಕೋಕ್ತಿ, ಸಾರೋಕ್ತಿ ,ನಾಣ್ನುಡಿ ಮುಂತಾದ ಪದಗಳು ಬಳಕೆಯಲ್ಲಿದ್ದರೂ ಗಾದೆ ಎಂಬ ಶಬ್ದವೇ ಹೆಚ್ಚು ಪ್ರಚಾರದಲ್ಲಿದೆ ಪ್ರಸ್ತುತ ಗಾದೆಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲಾ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯೂ ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ ಅದೇ ರೀತಿ ತಾಯಿ ಇರದಿದ್ದ ಜೀವನವೇ ಅಂಧಕಾರವಾಗುವುದು. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿದ್ದಂತೆ, ಮಾತೃದೇವೋಭವ ಎಂಬ ಮಾತು ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ಇರುವ ಹಿರಿಮೆಯನ್ನು ಬಿಂಬಿಸುತ್ತದೆ. ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಕೊತ್ತಂಬರಿ ಇತ್ಯಾದಿ ವಸ್ತುಗಳು ಒಂದುವೇಳೆ ಇಲ್ಲದಿದ್ದರೂ ಅಡುಗೆ ಮಾಡಬಹುದು ಆದರೆ ಒಪ್ಪಿಲ್ಲದೆ ಅಡುಗೆ ಆಗುವುದೇ ಇಲ್ಲ ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರು ತಾಯಿಗೆ, ಸಮನಾಗಬಲ್ಲ ಬಂಧುಗಳಿಲ್ಲ. ಆದ್ದರಿಂದಲೇ ಜನಪದ ತ್ರಿಪದಿಯಲ್ಲಿ ಗರತಿ “ಯಾರು ಇದ್ದರು ನನ್ನತಾಯಿಯವ್ನ ಹೋಲರ ಕೊಳ್ಳಿ ಮನಿಯಾಗ ಇದ್ದರೂ ಜ್ಯೋತಿ ನೀನ್ಯಾರ ಹೋಲರ, ಎಂದು ತಾಯಿ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.
ಹೆತ್ತ ತಾಯಿ, ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂತಹ ಕಷ್ಟ ಬಂದರೂ ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡುವುದಿಲ್ಲ, ಆದ್ದರಿಂದ ತಾಯಿಗಿಂತ ಬಂಧುವಿಲ್ಲ ಎಂಬ ಮಾತು ಅಕ್ಷರಶಃ ಅರ್ಥವತ್ತದ್ದಾಗಿದೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
9. ಆಕಳು ಕಪ್ಪಾದರೆ, ಹಾಲು ಕಪ್ಪೇ ?
ಗಾದೆಗಳು, ನಮ್ಮ ಪೂರ್ವಜರ ತಲೆತಲಾಂತರದ ಅನುಭವದ ಮೂಸೆಯಲ್ಲಿ ಬೆಂದು ಅದಗೊಂಡಿರುವ ನುಡಿಮುತ್ತುಗಳು. ಕನ್ನಡ ಭಾಷೆಯ ಸೌಂದರ್ಯವನ್ನು ಹೆಚ್ಚಿಸಿರುವುದಲ್ಲದೆ ಬದುಕಿಗೆ ದಾರಿದೀಪದಂತಿರುವ ಸಾವಿರಾರು ಗಾದೆ ಮಾತುಗಳಲ್ಲಿ ಪ್ರಸ್ತುತ ಗಾದೆಯೂ ಒಂದಾಗಿದೆ.
ಆಕಳಿನ ಬಣ್ಣ ಬಿಳಿ ಇರಬಹುದು. ಅಥವಾ ಕಪ್ಪು ಇರಬಹುದು ಆದರೆ ಆಕಳು ಕೊಡುವ ಹಾಲಿನ ಬಣ್ಣ ಮಾತ್ರ ಯಾವಾಗಲೂ ಬೆಳ್ಳಗೆ ಇರುತ್ತದೆ ಅಲ್ಲವೇ? ಹೌದು ಆಕಳಿನ ಬಣ್ಣವು ಅದರ ಹಾಲಿನ ಬಣ್ಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚೆನ್ನಾಗಿ ಹಾಲು ಕೊಡುವ ಹಸುವಿಗೆ ಬೆಲೆ ಇದೆಯೇ ಹೊರತು ನೋಡಲು ಬೆಳ್ಳಗೆ, ಸುಂದರವಾಗಿರುವ ಹಸು ಎಂಬ ಕಾರಣಕ್ಕೆ ಯಾರು ಅದಕ್ಕೆ ಬೆಲೆ ಕೊಡುವುದಿಲ್ಲ.
ಇದೇ ರೀತಿ ನಾವು ಸಹ ಬಣ್ಣಕ್ಕೆ, ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಡಬಾರದು, ವ್ಯಕ್ತಿಗಳ ಆಂತರ್ಯದ ಗುಣಕ್ಕೆ ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು. ದೇಹದ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯವು ಶ್ರೇಷ್ಠವಾದದ್ದು. ಬಾಹ್ಯ ಸೌಂದರ್ಯವು ನಶ್ವರವಾದದ್ದು ವಯಸ್ಸಾದ ಹಾಗೆ ಅದು ನಶಿಸುತ್ತಾ ಹೋಗುತ್ತದೆ. ಆದರೆ ಆತ್ಮ ಸೌಂದರ್ಯವು ಶಾಶ್ವತವಾದದ್ದು. ಕೊನೆಯವರೆಗೂ ಮರಣದ ನಂತರವೂ ಉಳಿಯುವಂತದ್ದು ಒಬ್ಬ ವ್ಯಕ್ತಿಯು ಮನಸ್ಸಿನ ತುಂಬೆಲ್ಲ ದುಷ್ಟತನವನ್ನು ತುಂಬಿಕೊಂಡಿದ್ದರೆ ನೋಡಲು ಅವನು ಎಷ್ಟೇ ಸುಂದರವಾಗಿದ್ದರೂ ಪ್ರಯೋಜನವಿಲ್ಲ. “ ಕಬ್ಬು ಡೊಂಕಾದರೆ ಸಿಹಿ ಡೊಂಕೆ” ಎನ್ನುವ ಹಾಗೆ ನೋಡಲು ಕುರೂಪಿಯಾಗಿದ್ದರು ಸಹ ಸದ್ಗುಣಗಳಿಂದ ಸಂಪನ್ನನಾದ ವ್ಯಕ್ತಿಯು ಎಲ್ಲರಿಗೂ ಇಷ್ಟವಾಗುತ್ತಾನೆ. ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ.
ಆದ್ದರಿಂದ ಹಣಕ್ಕೆ ಸೌಂದರ್ಯಕ್ಕೆ ಬೆಲೆ ಕೊಡದೆ ಗುಣಕ್ಕೆ ಬೆಲೆ ಕೊಡೋಣ ವ್ಯಕ್ತಿಗಳನ್ನು ಅವರ ರೂಪದಿಂದಲ್ಲ ಚಾರಿತ್ರ್ಯದಿಂದ ಗುರುತಿಸೋಣ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
10. ಹಣಕ್ಕಿಂತ ಗುಣ ಮುಖ್ಯ
ಸಂಸ್ಕೃತದ ‘ಗಾಥಾ’ ಎಂಬ ರೂಪವೇ ಕನ್ನಡದಲ್ಲಿ ಗಾದೆ ಎಂದಾಗಿದೆ ನಮ್ಮ ಪೂರ್ವಜರು ತಮ್ಮ ಅನುಭವಗಳಿಂದ ಕಟ್ಟಿಕೊಟ್ಟಿರುವ ನೀತಿಯ ಸಾರದಂತಿರುವ ಈ ಗಾದೆಗಳು ಬದುಕಿನಲ್ಲಿ ನಮ್ಮನ್ನು ಸರಿದಾರಿಯಲ್ಲಿ ಮುನ್ನಡೆಸುವ ಮಾರ್ಗದರ್ಶಿ ಸೂತ್ರಗಳಾಗಿವೆ.. ಪ್ರಸ್ತುತ ಗಾದೆಯು ಅಂತಹ ಒಂದು ನುಡಿಮುತ್ತಾಗಿದೆ.
ನಮ್ಮ ಬದುಕು ನಡೆಯಬೇಕೆಂದರೆ ನಮಗೆ ಹಣ ಬೇಕು. ಹೊಟ್ಟೆಗಾಗಿ, ಬಟ್ಟೆಗಾಗಿ, ವಿದ್ಯಾಭ್ಯಾಸಕ್ಕೆ, ಟಿವಿ, ಕಾರು ಖರೀದಿಸಲು ಹೀಗೆ ನಮ್ಮ ಬಯಕೆಗಳನ್ನೆಲ್ಲ ಈಡೇರಿಸಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಹಣ. “ಕಾಂಚಾಣಂ ಕಾರ್ಯಸಿದ್ಧಿ” ಎನ್ನುವಂತೆ ಹಣವಂದಿದ್ದರೆ ಯಾವ ಕಾರ್ಯವನ್ನು ಬೇಕಾದರೂ ಸಾಧಿಸಬಹುದು ಅಲ್ಲವೇ?, ಶ್ರೀಮಂತರಿಗೆ ಎಂತಹ ತೊಂದರೆ ಬಂದರು ತಮ್ಮ ಹಣಬಲದಿಂದ ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ. ಆದ್ದರಿಂದ ಎಲ್ಲರಿಗೂ ಹಣ ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ.
ಹಾಗಾದರೆ ಜೀವನದಲ್ಲಿಹಣವೇ ಎಲ್ಲಕ್ಕಿಂತ ಮುಖ್ಯವೆ? ಹಣಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲವೇ? ಹಾಗೆ ಭಾವಿಸಿದರೆ ನಮ್ಮ ತಿಳುವಳಿಕೆ ಖಂಡಿತ ತಪ್ಪು. ಏಕೆಂದರೆ ಹಣಕ್ಕಿಂತಲೂ ಮುಖ್ಯವಾದದ್ದು ಮನುಷ್ಯನ ಗುಣ. ಎಷ್ಟೇ ಹಣವಿದ್ದರೂ ಒಳ್ಳೆಯ ಗುಣವಿಲ್ಲದಿದ್ದರೆ ಅದು ವ್ಯರ್ಥ. ಹಣವನ್ನು ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆದರೆ ಗುಣವನ್ನು ಕಳೆದುಕೊಂಡರೆ ಗಳಿಸುವುದು ಕಷ್ಟ. ಹಣವು ಅಹಂಕಾರವನ್ನು ತಂದುಕೊಟ್ಟರೆ ಗುಣವು, ಗೌರವವನ್ನು ತಂದುಕೊಡುತ್ತದೆ. ಹಣಬಲದಿಂದ ಸೇವಕರನ್ನು ಸಂಪಾದಿಸಬಹುದು, ಆದರೆ ಸದ್ಗುಣದಿಂದ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಬಹುದು, ವಸ್ತುಗಳನ್ನು ಕೊಳ್ಳಲು ಹಣ ಬೇಕು, ಆದರೆ ಸಂಬಂಧಗಳನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ಬೇಕು. ಹಣವಂತನಿಗೆ ಹಣವಿರುವವರೆಗೆ ಮಾತ್ರ ಬೆಲೆ, ಆದರೆ ಗುಣವಂತನಿಗೆ ಸದಾ ಕಾಲ ಬೆಲೆ.
ಆದ್ದರಿಂದ ಹಣದ ಹಿಂದೆ ಬಿದ್ದು ನೈತಿಕತೆಯನ್ನು ಕಳೆದುಕೊಳ್ಳಬಾರದು, ನ್ಯಾಯ ಮಾರ್ಗದಿಂದ ಹಣ ಸಂಪಾದನೆ ಮಾಡಬೇಕು. ಹಣಕ್ಕಾಗಿ ಗುಣವನ್ನು ಬಲಿ ಕೊಡಬಾರದು ಹಣವಿರಲಿ ಇಲ್ಲದಿರಲಿ ಸದಾ ಸದ್ಗುಣಿಗಳಾಗಿ ಬಾಳಬೇಕು ಇದೆ ಈ ಗಾದೆ ಮಾತಿನ ಇಂಗಿತ.
11. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
ಗಾದೆ ವೇದಕ್ಕೆ ಸಮಾನ ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು, ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಅವು ಆಕಾರದಲ್ಲಿ ವಾಮನನಾದರು ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಕನ್ನಡ ನಾಡಿನಲ್ಲಿ ಅತ್ಯಂತ ಪ್ರಸಿದ್ಧವಾದ ಒಂದು ನಾಣ್ನುಡಿಯಾಗಿದೆ.
ಕುಂಬಾರ ಒಂದು ಮಡಿಕೆ ಮಾಡಬೇಕಾದರೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಕೆರೆಯಿಂದ ಜೇಡಿ ಮಣ್ಣು ತಂದು ಅದನ್ನು ಹದಮಾಡಿ ತಟ್ಟಿ ಮಡಿಕೆಯನ್ನು ಮಾಡಿ ಅದನ್ನು ಒಣಗಿಸಿ, ಬೇಯಿಸಿ ನಂತರ ಮಾರಾಟ ಮಾಡುತ್ತಾನೆ. ಆದರೆ ಅಷ್ಟು ಪ್ರಯಾಸದಿಂದ ತಯಾರಿಸಿದ ಆ ಮಡಿಕೆಯನ್ನು ಒಡೆದು ಹಾಕಲು ಒಂದು ದೊಣ್ಣೆ ಪೆಟ್ಟು ಸಾಕು. ಅಂದರೆ “ಕಟ್ಟುವುದು ಕಠಿಣ ಕೆಡವುವುದು ಸುಲಭ” ಎನ್ನುವಂತೆ, ಯಾವುದೇ ವಸ್ತುವನ್ನು ಸೃಷ್ಟಿ ಮಾಡುವುದು ಕಷ್ಟ ಆದರೆ ಅದನ್ನು ನಾಶ ಮಾಡುವುದು ಸರಳ. ಅದೇ ರೀತಿ ಒಂದು ಕಾರ್ಯವನ್ನು ಮಾಡಿ ಮುಗಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ, ಆದರೆ ಆ ಕಾರ್ಯವನ್ನು ಕೆಡಿಸುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಉದಾಹರಣೆಗೆ ಪ್ರಾಚೀನ ಭಾರತೀಯರು ಎಷ್ಟೋ ವರ್ಷಗಳ ಕಾಲ ಕಠಿಣ ಶ್ರಮವಹಿಸಿ ಭಾರತದ ವಾಸ್ತುಶಿಲ್ಪಗಳನ್ನು ನಿರ್ಮಿಸಿದರು. ಆದರೆ ವಿದೇಶಿಯರು ದಾಳಿ ಮಾಡಿ ಕ್ಷಣಮಾತ್ರದಲ್ಲಿ ಅವುಗಳನ್ನು ಕೆಡವಿ ಹಾಕಿದರು.
ಹಾಗೆಯೇ ಮನುಷ್ಯ ಸಮಾಜದಲ್ಲಿ ಒಳ್ಳೆಯವನೆಂದು ಗುರುತಿಸಿಕೊಳ್ಳಲು ಜೀವನವೆಲ್ಲ ಕಷ್ಟ ಪಡಬೇಕು ಆದರೆ ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡು ಕೆಟ್ಟವನೆನಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಒಂದೇ ಒಂದು ತಪ್ಪು ಮಾಡಿದರು ಹಲವಾರು ವರ್ಷಗಳ ಕಾಲ ಸಂಪಾದಿಸಿದ ಗೌರವವು ಕ್ಷಣಾರ್ಧದಲ್ಲಿ ಮಣ್ಣು ಪಾಲಾಗುತ್ತದೆ. ಆದ್ದರಿಂದ ನಾವು ಬಹಳ ಜಾಗರೂಕತೆಯಿಂದ ಜೀವನ ಮಾಡಬೇಕು. ಈ ಅರ್ಥದಲ್ಲಿ ಈ ಗಾದೆ ಬಳಕೆಯಲ್ಲಿದೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
12. ಕೋಣನಿಗೆ ದೊಣ್ಣೆ ಪೆಟ್ಟು, ಜಾಣನಿಗೆ ಮಾತಿನ ಪೆಟ್ಟು.
ನಮ್ಮ ಪುರಾತನರು ಶಾಲೆಯ ಮೆಟ್ಟಿಲು ಹತ್ತದಿದ್ದರು ಸಾಹಿತ್ಯ ಪ್ರಯೋಗದಲ್ಲಿ ಪ್ರವೀಣರಾಗಿದ್ದರು. ವಿಶಾಲವಾದ ಜಗತ್ತೇ ಅವರಿಗೆ ಶಾಲೆಯಾಗಿತ್ತು. ಜೀವನದ ಅನುಭವವೇ ಅವರಿಗೆ ಶಿಕ್ಷಕರಾಗಿತ್ತು, ತಮ್ಮ ಈ ಅನುಭವದಿಂದ ತಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾದ ಅಮೂಲ್ಯ ಗಾದೆ ಮಾತುಗಳನ್ನು ಅವರು ಕಟ್ಟಿದರು. ಅಂತಹ ಅಗಣಿತ ಜಾಣ್ನುಡಿಗಳಲ್ಲಿ ಪ್ರಸ್ತುತ ಗಾದೆಯೂ ಒಂದಾಗಿದ್ದು ಸಮಾಜದಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ.
ಎದುರಿನವರ ಗುಣ ಸ್ವಭಾವ, ವರ್ತನೆಗೆ ತಕ್ಕಂತೆ ನಾವು ನಮ್ಮ ನಡವಳಿಕೆಯನ್ನು ತೋರಿಸಬೇಕಾಗುತ್ತದೆ. ಮೂರ್ಖನಾದವನಿಗೆ ಏನಾದರೂ ಹೇಳುವುದು ತುಂಬಾ ಕಷ್ಟ. ಒಳ್ಳೆಯ ಮಾತಿನಲ್ಲಿ ಹೇಳಿದರೆ ತಿಳಿದುಕೊಳ್ಳುವ ಜಾಯಮಾನ ಅವನದಲ್ಲ, ಅವನನ್ನು ದಾರಿಗೆ ತರಬೇಕಾದರೆ ದೊಣ್ಣೆಯೆ ಬೇಕಾಗುತ್ತದೆ. ಅಂದರೆ ಬಲಪ್ರಯೋಗದಿಂದಲೇ ಅವನಿಗೆ ಬುದ್ಧಿ ಕಲಿಸಬೇಕಾಗುತ್ತದೆ. ಉಪದೇಶದಲ್ಲಿ ಸಾಮ, ದಾನ, ದಂಡ, ಭೇದ ಎಂಬ ನಾಲ್ಕು ಮಾರ್ಗಗಳನ್ನು ನಮ್ಮ ಹಿರಿಯರು ತಿಳಿಸಿದ್ದಾರೆ. ಹುಂಬನಾದವನಿಗೆ ಉಪದೇಶ ಮಾಡಲು ದಂಡ ಮಾರ್ಗವೇ ಸೂಕ್ತ. ಆದ್ದರಿಂದ ಪೊಲೀಸರು ಅಪರಾಧಿಗಳ ಬಾಯಿ ಬಿಡಿಸಲು ಸಾಮಾನ್ಯವಾಗಿ ಇದೆ ಮಾರ್ಗವನ್ನು ಅನುಸರಿಸುತ್ತಾರೆ. ಒಳ್ಳೆಯ ಮಾತಿನಲ್ಲಿ ವಿಚಾರಣೆ ಮಾಡಿದರೆ ಅವರು ಖಂಡಿತ ಸತ್ಯವನ್ನು ಬಾಯಿ ಬಿಡುವುದಿಲ್ಲ, ನಾಲ್ಕು ಚಡಿ ಏಟು ಬಿದ್ದಾಗಲೇ ಅವರು ಬಾಯಿ ತೆರೆಯುವುದು.
ಆದರೆ ಜಾಣನೊಂದಿಗೆ ವಿವೇಕಿ ಯಾದವನೊಂದಿಗೆ ವ್ಯವಹರಿಸುವಾಗಲು ನಾವು ಇದೇ ಮಾರ್ಗವನ್ನು ಅನುಸರಿಸಬಾರದು ಬುದ್ಧಿವಂತನಿಗೆ ದೊಣ್ಣೆ ಪೆಟ್ಟಿನ ಅವಶ್ಯಕತೆ ಬರುವುದಿಲ್ಲ. ಸೂಕ್ಷ್ಮ ಗ್ರಾಹಿಯಾದವನು ಮಾತಿನಲ್ಲಿ ಹೇಳಿದರೆ ಸಾಕು ಅರಿತುಕೊಂಡು ಬಿಡುತ್ತಾನೆ. ಮಾತಿನ ಮೌಲ್ಯ ಬಲ್ಲವನಿಗೆ ಬಲಪ್ರಯೋಗದ ಅಗತ್ಯವೇ ಇಲ್ಲ. ಸಂವೇದನಶೀಲನೆಗೆ ದಂಡಪ್ರಯೋಗ ಮಾಡುವುದು ಕೂಡ ಸರಿಯಲ್ಲ.” ಉಗುರಿನಿಂದ ಹೋಗುವುದಕ್ಕೆ ಕೊಡಲಿ ಏಕೆ ಬೇಕು?” ಅಲ್ಲವೇ, ಒಟ್ಟಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಜನರ ಸ್ವಭಾವಕ್ಕೆ ಅನುಗುಣವಾಗಿ ನಮ್ಮ ವರ್ತನೆಯನ್ನು ಮಾರ್ಪಡಿಸಿಕೊಂಡು, ನಮ್ಮ ಕಾರ್ಯ ಸಾಧನೆಯನ್ನು ಸುಲಭಗೊಳಿಸಿಕೊಳ್ಳಬೇಕು ಎಂಬ ಬೋಧನೆಯನ್ನು ಈ ಗಾದೆಯು ನಮಗೆ ನೀಡುತ್ತದೆ.
13. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು.
ಗಾದೆಗಳು ಹಲವರ ಜ್ಞಾನ, ಒಬ್ಬನ ವಿವೇಕ. ಗಾದೆಗಳ ಕಟ್ಟುವಿಕೆಯಲ್ಲಿ ಸಮುದಾಯದ ಆಗುಹೋಗುಗಳಲ್ಲಿ ಉಂಟಾಗುವ ಯಾವುದಾದರೂ ಒಂದು ಪ್ರಸಂಗ ಇಲ್ಲವೇ ಜೀವನದ ಏರಿಳಿತಗಳ ಅವಲೋಕನ ಕಂಡುಬರುತ್ತದೆ. ಈ ಮೇಲಿನದು ಅಂತಹ ಗಾದೆಗಳಲ್ಲಿ ಒಂದು.
ಈ ಗಾದೆಯ ಮಾತಿನ ಅರ್ಥ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ತಾನು ಮಾಡುವ ಕಾಯಕವನ್ನು ಮಾತ್ರ ಮುಂದುವರಿಸುತ್ತಲೇ ಇರಬೇಕು. ನನಗೇನು ಸಾಕಷ್ಟು ಹಣವಿದೆ ಎಂದು ತನ್ನ ಕಾಯಕದಲ್ಲಿ ಅಸಡ್ಡೆ ಮಾಡಿದರೆ ಆತ ಎಷ್ಟೇ ಹಣವಂತನಾಗಿರಲಿ, ಒಂದಲ್ಲ ಒಂದು ದಿನ ಬಡವನಾಗುತ್ತಾನೆ. ಎಷ್ಟೇ ಹಣವಿದ್ದರೂ, ಅದನ್ನು ಮರು ತುಂಬದೆ ಬರಿಯ ಖರ್ಚು ಮಾಡುತ್ತಾ ಹೋದರೆ ಅದು ಖಾಲಿಯಾಗಲೇ ಬೇಕಲ್ಲವೇ? ಇದನ್ನರಿತ ನಮ್ಮ ಪೂರ್ವಜರು ಎಚ್ಚರಿಕೆಯ ರೂಪದಲ್ಲಿ “ಕೂತು ತಿಂದರೆ ಕುಡಿಕೆ ಹೊನ್ನು ಸಾಲದು” ಎಂದರು.
ನಾವು ನಿರಂತರ ಕಾಯಕಯೋಗಿಗಳಾಗಬೇಕು ಬದುಕಿನಲ್ಲಿ ಆಯಾ ಸಮಯಕ್ಕೆ ತಕ್ಕಂತೆ ನಾವು ಪ್ರಸ್ತುತರಾಗಿರಬೇಕು ಮನುಷ್ಯ ಸಮಾಜ ಮುಖಿಯಾಗಿ ಹತ್ತಾರು ಜನಕ್ಕೆ ಉಪಯೋಗವಾಗುವಂತಹ ಕೆಲಸ ಮಾಡುತ್ತ ಇದ್ದರೆ ಬದುಕು ಹಸನಾಗಿರುತ್ತದೆ. ಹೋಗಲಿ ಕೊನೆಯ ಪಕ್ಷ ತನ್ನ ಒಳಿತಿಗಾಗಿಯಾದರೂ ಸರಿಯೇ ಆತ ದುಡಿಯುತ್ತಿರಬೇಕು. ಕೆಲಸ ಮಾಡದೆ ಸೋಮಾರಿಯಾಗಿ ಹೆಚ್ಚಿನ ವಿಶ್ರಾಂತಿ ತೆಗೆದುಕೊಂಡರೆ ಅದು ಮನುಷ್ಯನನ್ನು ಬಡವನನ್ನಾಗಿ ಮಾಡುತ್ತದೆ. ದೇಹದಲ್ಲಿ ರೋಗ ರುಜಿನಗಳು ಮನೆ ಮಾಡುತ್ತವೆ. ಕೊನೆಗೆ ಆತನ ಅಂತ್ಯ ಕೂಡ ಆಗುತ್ತದೆ. ಮನುಷ್ಯ ಎಷ್ಟೇ ಬುದ್ಧಿವಂತನಿರಲಿ ಅಥವಾ ಹಣವಂತನಿರಲಿ ಏನು ಮಾಡದೆ ನೆಪತ್ಯಕ್ಕೆ ಸರಿದನೆಂದರೆ ಆತನಿಗೆ ಬೆಲೆ ಇಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಇಲ್ಲಿ ಹೇಳಿದ್ದಾರೆ. ಬಸವಣ್ಣನವರು ಕಾಯಕವೇ ಕೈಲಾಸ, ಎಂದು ಹೇಳಿದರು ಅಂದರೆ ಎಷ್ಟೇ ಶ್ರೀಮಂತನಿರಲಿ. ಕಾಯಕದಲ್ಲಿ ನಿರತನಾಗಿರಬೇಕು ದುಡಿಯದೇ ತಿನ್ನುವ ಅಧಿಕಾರ ಯಾರಿಗೂ ಇಲ್ಲ ದುಡಿಯದೇ ತಿಂದರೆ ಎಷ್ಟು ಸಂಪತ್ತಿದ್ದರೂ ಸಾಕಾಗುವುದಿಲ್ಲ ಎಂಬುದೇ ಇದರರ್ಥ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
14. ಉತ್ಸಾಹವೇ ಯೌವನ ಚಿಂತೆಯೇ ಮುಪ್ಪು
ವಿಶ್ವದ ಹಲವಾರು ಭಾಷೆಗಳಲ್ಲಿ ಇರುವಂತೆ ನಮ್ಮ ಭಾಷೆಯಲ್ಲಿಯೂ ಗಾದೆಮಾತುಗಳು ಸಮೃದ್ಧವಾಗಿವೆ. ಗಾದೆಗಳು ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತದೆ, ಮಾತುಗಳನ್ನು ಪರಿಣಾಮಕಾರಿಯಾಗಿಸುತ್ತದೆ, ತಪ್ಪು ಮಾಡಿದವರನ್ನು ತಿದ್ದಿ ಬುದ್ದಿ ಹೇಳುತ್ತವೆ. ಪ್ರಸ್ತುತ ಗಾದೆಯು ಅಂತಹ ಒಂದು ಜಾಣ್ನುಡಿಯಾಗಿದೆ.
ಬದುಕಿನಲ್ಲಿ ನಾವು ಸದಾ ಉತ್ಸಾಹದಿಂದ ಇರಬೇಕು. ಜೀವನ ಎಂದ ಮೇಲೆ ಕಷ್ಟಕಾರ್ಪಣ್ಯಗಳು ಬರುವುದು ಸಹಜ, ಹಾಗೆಂದು ಕಷ್ಟಗಳಿಗೆ ಹೆದರಿ ಚಿಂತಿಸುತ್ತಾ ಕುಳಿತರೆ, ಬದುಕಿನ ಖುಷಿಯನ್ನು ಅನುಭವಿಸಲು ಸಾಧ್ಯವೇ ಆಗುವುದಿಲ್ಲ. ಒಂದು ಚಿಕ್ಕ ಗಾಯವನ್ನು ಕೆರೆಯುತ್ತಾ ಕುಳಿತರೆ, ಅದು ಬೆಳೆದು ದೊಡ್ಡ ಹುಣ್ಣಾಗುವ ಹಾಗೆ,ಚಿಕ್ಕ ವಿಷಯಕ್ಕೆ, ಚಿಂತೆ ಮಾಡುತ್ತಾ ಕುಳಿತರೆ ಅದೇ ದೊಡ್ಡ ಸಮಸ್ಯೆಯಾಗಿ ಜೀವನದ ಸಂತೋಷವನ್ನು ಹಾಳು ಮಾಡುತ್ತದೆ. ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ, ಚಿಂತೆಗು ಚಿತೆಗೂ ವ್ಯತ್ಯಾಸ ಒಂದು ಸೊನ್ನೆ ಅಷ್ಟೇ. ಚಿತೆಯು ಜೀವವಿಲ್ಲದ ವಸ್ತುವನ್ನು ಸುಟ್ಟರೆ, ಚಿಂತೆಯು ಜೀವಂತ ವ್ಯಕ್ತಿಯನ್ನು ಸುಡುತ್ತದೆ. ಚಿಂತೆ ಮಾಡುತ್ತಾ ಕುಳಿತರೆ ಅದು ನಮ್ಮ ನೆಮ್ಮದಿಯನ್ನು ಕೆಡಿಸಿ ಅಕಾಲ ವೃದ್ಯಾಪ್ಯವನ್ನು ಉಂಟುಮಾಡಿ ಬದುಕನ್ನು ನಶ್ವರ ಗೊಳಿಸುತ್ತದೆ.
ಆದ್ದರಿಂದ ಚಿಂತಿಸುವುದನ್ನು ಬಿಡಬೇಕು. ಬದುಕಿರುವಷ್ಟು ಕಾಲ ಸಂತೋಷದಿಂದ ಜೀವನವನ್ನು ಕಳೆಯಬೇಕು, ಲವಲವಿಕೆಯಿಂದ ಬದುಕಿದರೆ ಸಮಸ್ಯೆಗಳು ನಮ್ಮ ಸನಿಹವು ಸುಳಿಯುವುದಿಲ್ಲ. ಮನಸ್ಸಿನಲ್ಲಿ ಉತ್ಸಾಹವಿದ್ದರೆ ಅದು ವೃದ್ಧನಲ್ಲೂ ಯೌವ್ವನದ ಶಕ್ತಿಯನ್ನು ತುಂಬುತ್ತದೆ. ಜೀವನೋತ್ಸಹ ಆರೋಗ್ಯವನ್ನು ವೃದ್ಧಿಸಿ ಆಯುಷ್ಯವನ್ನು ಗಟ್ಟಿಗೊಳಿಸುತ್ತದೆ. ಆದ್ದರಿಂದ ಜೀವನದಲ್ಲಿ ಏನೇ ಸಮಸ್ಯೆಗಳಿರಲಿ ಎಲ್ಲವನ್ನೂ ಬದಿಗಿಟ್ಟು ಉಲ್ಲಾಸದಿಂದ ಬದುಕಬೇಕು, ನಗುನಗುತ್ತಾ ಬಾಳಿ, ಜೀವನದ ರಸವನ್ನು ಸವಿಯಬೇಕು.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
15. ತಾಳಿದವನು ಬಾಳಿಯಾನು.
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು, ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಇಂತಹ ಅಮೂಲ್ಯವಾದ ಅಗಣಿತ ಗಾದೆಮಾತುಗಳಲ್ಲಿ ತಾಳಿದವನು ಬಾಳಿಯಾನು ಎಂಬ ಗಾದೆಯೂ ಒಂದಾಗಿದೆ.
ದುಡುಕು, ಕೋಪ, ಆತುರ ಮುಂತಾದವು, ಅನರ್ಥ ಸಾಧನಗಳು ಜೀವನದಲ್ಲಿ ಏಳುಬೀಳುಗಳು, ಕಷ್ಟಕಾರ್ಪಣ್ಯ, ಸುಖ-ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ ಆದರೆ ಅವು ಯಾವುವು ಶಾಶ್ವತವಲ್ಲ. ಬದುಕಿನಲ್ಲಿ ಎಂತಹ ಸಮಸ್ಯೆಗಳೇ ಇರಲಿ ಸ್ವಲ್ಪ ತಾಳ್ಮೆ ವಹಿಸಿದರೆ ಎಲ್ಲಾ ಕಷ್ಟಗಳು ದೂರವಾಗಿ ಸುಖವು ಬಂದೇ ಬರುತ್ತದೆ. ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು. ತಾಳ್ಮೆಯಿಂದ ಇರಬೇಕು ದಾಸರ ಮಾತಿನಂತೆ “ತಾಳುವಿಕೆಗಿಂತ ತಪವು ಇಲ್ಲ” ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಎರಡನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಅದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ
ನಿರ್ಧಾರವು ಭವಿಷ್ಯಕ್ಕೆ ಮಾರಕವಾಗಿರುತ್ತದೆ. ಪರಿಸ್ಥಿತಿಯನ್ನು ತಾಳ್ಮೆಯಿಂದ, ಧೈರ್ಯದಿಂದ ಎದುರಿಸಿದಾಗ ಬದುಕು ಗಟ್ಟಿಯಾಗುತ್ತಾ ಹೋಗುತ್ತದೆ.
ಸಿಟ್ಟು ತಾಳ್ಮೆಯ ಶತ್ರು, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕೆಂದರೆ ಮೊದಲು ಸಿಟ್ಟನ್ನು ಗೆಲ್ಲಬೇಕು. ಕೋಪದಲ್ಲಿ ವಿವೇಕವನ್ನು ಕಳೆದುಕೊಂಡು ಏನಾದರೂ ಎಡವಟ್ಟು ಮಾಡಿಕೊಂಡರೆ ಅದನ್ನು ಸರಿಪಡಿಸುವುದು ಕಷ್ಟ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ.
ಆಧುನಿಕ ಜೀವನ ಶೈಲಿಯಲ್ಲಿ ಎಲ್ಲವೂ ಅವಸರಮಯವಾಗಿದೆ. ಆದರೆ ಅವಸರದಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು, ಒಂದು ಗಿಡಕ್ಕೆ ದಿನಕ್ಕೆ ಒಂದು ಸಲ ನೀರು ಹಾಕುವ ಬದಲು ಹತ್ತು ಸಲ ನೀರು ಹಾಕಿದರೆ ಅದು ಬೇಗ ಬೆಳೆದು ಫಲ ಕೊಡುವುದೇ ? ಋತು ಬಂದಾಗಲೇ ಅದು ಫಲ ಕೊಡುವುದು. ಅಲ್ಲಿಯವರೆಗೆ ಕಾಯಲೇಬೇಕು ಆದ್ದರಿಂದ “ಅವಸರವೇ ಅಪಾಯಕ್ಕೆ ಕಾರಣ” ಎಂಬುದನ್ನು ಅರಿಯೋಣ ತಾಳ್ಮೆಯಿಂದ ಬದುಕಿ ನೆಮ್ಮದಿಯನ್ನು ಹೊಂದೋಣ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
16. ಅಂಗೈ ಹುಣ್ಣಿಗೆ, ಕನ್ನಡಿ ಬೇಕೆ?
ಗಾದೆ ಮಾತುಗಳು ನಮ್ಮ ಜನಪದರು ನಮ್ಮ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳಾಗಿವೆ. ಜೀವನದಲ್ಲಿ ಸೋತಾಗ ಸಾಂತ್ವಾನ ಹೇಳುವ, ತಪ್ಪಿದಾಗ ಕಿವಿ ಹಿಂದಿ ಬುದ್ಧಿ ಹೇಳುವ ಈ ಚತುರೋಕ್ತಿಗಳು ನಮ್ಮ ಬದುಕನ್ನು ಹಸನುಗೊಳಿಸುವ ನೀತಿ ಸೂತ್ರಗಳಾಗಿವೆ. ಇಂತಹ ಅಸಂಖ್ಯಾ ಗಾದೆಗಳಲ್ಲಿ ಪ್ರಸ್ತುತ ಗಾದೆಯು ಒಂದು.
ನಮ್ಮ ಅಂಗೈಯಲ್ಲಿ ಹುಣ್ಣಾಗಿದ್ದರೆ, ಕಣ್ಣಿಗೆ ಅದು ಸ್ಪಷ್ಟವಾಗಿ ಕಾಣುತ್ತದೆ. ನೇರವಾಗಿ ಅದನ್ನು ನೋಡಬಹುದು. ಅಂಗೈಯಲ್ಲಿ ಇರುವುದನ್ನು ನೋಡಲು ಕನ್ನಡಿಯ ಸಹಾಯ ಬೇಕಾಗಿಲ್ಲ. ನಮ್ಮ ದೇಹದ ಹಿಂಭಾಗದಲ್ಲಿ ಏನಾದರೂ ಹುಣ್ಣುಗಳಾದರೆ ಕನ್ನಡಿಯನ್ನು ಬಳಸಿ ಪ್ರತಿಬಿಂಬದ ಮೂಲಕ ನೋಡಬೇಕಾಗುತ್ತದೆ. ಆದರೆ ಕಣ್ಣಿಗೆ ನೇರವಾಗಿ ಕಾಣುವ ಭಾಗವನ್ನು ಗಮನಿಸಲು ಕನ್ನಡಿಯ ಅಗತ್ಯವಿಲ್ಲ. ಅಂತೆಯೇ ಕೆಲವು ಸತ್ಯ ಸಂಗತಿಗಳು, ತಪ್ಪುಗಳು, ಅಪರಾಧಗಳು ಕಣ್ಣಿಗೆ ಕಾಣುವಂತೆಯೇ ಸುಸ್ಪಷ್ಟವಾಗಿ ಇರುತ್ತವೆ. ಸುಳ್ಳು ಹೇಳಿ ಅವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಸತ್ಯವನ್ನು, ಮಾಡಿದ ತಪ್ಪನ್ನು, ಅಪರಾಧವನ್ನು ಮರೆಮಾಚಿ, ಹಲವು ಕಾರಣಗಳನ್ನು ಹೇಳಿ ಸಾಧಿಸಿದರು ಸಹ ಸತ್ಯವೂ ಮರೆಯಾಗುವುದಿಲ್ಲ, ಕಣ್ಣಿಗೆ ಕಂಡೆ ಕಾಣುತ್ತದೆ. ಸುಳ್ಳುಸುಳ್ಳೇ, ಸತ್ಯ ಸತ್ಯವೇ. ಕೆಲವು ಸಲ ಅರಿವಿಗೆ ಬಾರದೆ, ತಪ್ಪುಗಳಾಗಬಹುದು ಆಗ ಅದು ಬೇರೆಯವರಿಂದ ನಮ್ಮ ಗಮನಕ್ಕೆ ಬರಬಹುದು, ಅನೇಕ ಬಾರಿ ಗೊತ್ತಿದ್ದು, ತಪ್ಪು ಮಾಡಿದಾಗ ಅದನ್ನು ಬೇರೆ ಯಾರು ತೋರಿಸಲು ಅಗತ್ಯವಿರುವುದಿಲ್ಲ
ಉದಾಹರಣೆಗೆ ಕೆಲವು ಭ್ರಷ್ಟ ರಾಜಕಾರಣಿಗಳು ಮಾಡಿದ ಅನಾಚಾರ ಇಡೀ ಸಮಾಜಕ್ಕೆ ಗೊತ್ತಿರುತ್ತದೆ, ಆದರೂ ಅವರು ತಾವೇನು ತಪ್ಪು ಮಾಡಿಲ್ಲ ಎಂಬಂತೆ ನಟಿಸುತ್ತಾರೆ. ನಾನು ತಪ್ಪು ಮಾಡಿದರೆ ಸಾಕ್ಷಿ ತೋರಿಸಿ ಎಂದು ಸವಾಲು ಬೇರೆ ಹಾಕುತ್ತಾರೆ. ಅನ್ಯರಿಗೆ ಮೋಸ ಮಾಡಬಹುದು ಆದರೆ ನಮ್ಮ ಆತ್ಮಕ್ಕೆ ನಾವು ವಂಚನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಲ್ಲವೇ?. ತಾನು ಮಾಡಿದ ತಪ್ಪು ಮಾಡಿದವನಿಗೆ ತಿಳಿದಿರುವಾಗ ಆ ತಪ್ಪನ್ನು ತೋರಿಸಲು ಬೇರೆ ಯಾರು ಬೇಕಾಗುವುದಿಲ್ಲ. ಈ ಅರ್ಥದಲ್ಲಿ ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು ಎಂಬ ಗಾದೆ ಹುಟ್ಟಿಕೊಂಡಿದೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
17. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು
ಹತ್ತು ಸಾಧಾರಣ ಮಾತುಗಳನ್ನು ಆಡುವುದಕ್ಕಿಂತ ಒಂದು ಗಾದೆಯನ್ನು ಹೇಳುವುದು ಸೂಕ್ತ. ಹೌದು ಹೇಳಬೇಕಾದುದ್ದನ್ನು ಒಂದೇ ಮಾತಿನಲ್ಲಿ ಪರಿಣಾಮಕಾರಿಯಾಗಿ ಹೇಳುವ ಸಲುವಾಗಿ, ಜನಪದರು ತಮ್ಮ ಅನುಭವ ಮತ್ತು ಜಾಣ್ಮೆಯನ್ನು ಬಳಸಿ ಹೊಸೆದ ಚತುರೋಕ್ತಿಗಳೇ ಗಾದೆಗಳಾಗಿ , ಲೋಕ ವ್ಯವಹಾರ ಮತ್ತು ನೈತಿಕ ಮೌಲ್ಯಗಳನ್ನು ಮಾರ್ಮಿಕವಾಗಿ ಬೋಧಿಸುತ್ತಾ ನಮ್ಮ ಜೀವನವನ್ನು ಬೆಳಗುತ್ತಿವೆ.
ನಾವು ಮಾತನಾಡುವ ಪ್ರತಿಯೊಂದು ಮಾತು ಮತ್ತೊಬ್ಬರಿಗೆ ಸಂತೋಷವನ್ನು ನೀಡುವಂತಿರಬೇಕು. ನಮ್ಮ ಮಾತುಗಳನ್ನು ಮತ್ತೆ ಮತ್ತೆ ಅವರು ಕೇಳುವ ಹಾಗೆ ಇರಬೇಕು. ನಮ್ಮ ಮಾತುಗಳು ಎಂದಿಗೂ ಕೂಡ ಬೇರೆಯವರಿಗೆ ಬೇಸರ ಉಂಟು ಮಾಡಬಾರದು, ಮುಧವಾಗಿ ಇರಬೇಕು. ಈ ಗಾದೆಯು ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತು ಎಂಬುದು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಒಬ್ಬರ ಅಭಿಪ್ರಾಯಗಳನ್ನು ಮತ್ತೊಬ್ಬರಿಗೆ ತಿಳಿಸಲು ಮಾತು ಅಗತ್ಯ. ಮಾತಿನ ಬಗ್ಗೆ ಹಲವಾರು ಗಾದೆಗಳಿವೆ. “ಮಾತು ಬಲ್ಲವ ಮಾಣಿಕ್ಯ ತಂದ ಮಾತರಿಯದವ ಜಗಳ ತಂದ”, “ಮಾತು ಬಲ್ಲವನಿಗೆ ಜಗಳವಿಲ್ಲ”, “ಮಾತೆ ಮುತ್ತು ಮಾತೆ ಮೃತ್ಯು”, ಹಾಗೆಯೇ ಬಸವಣ್ಣನವರು ಹೇಳಿದ್ದಾರೆ, “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದು ಇವೆಲ್ಲ ಕೂಡ ಮಾತಿನ ಮಹತ್ವವನ್ನು ತಿಳಿಸುತ್ತವೆ.
ಮಾತು ಎಂಬುದು ಮನುಷ್ಯನಿಗೆ ಸಿಕ್ಕಿರುವ ದೊಡ್ಡ ಉಡುಗೊರೆ. ಈ ವಾಕ್ ಶಕ್ತಿ ಎಂಬುದು ವಿದ್ಯುತ್ ಶಕ್ತಿ ಇದ್ದಂತೆ ಉಪಾಯವಾಗಿ ಕ್ರಮವರಿತ್ತು ಬಳಸಿದರೆ ದೊಡ್ಡ ಉಪಕಾರಿಯಾಗುತ್ತದೆ. ಅದನ್ನು ಬಿಟ್ಟು ಕ್ರಮ ತಪ್ಪಿದರೆ ಅದಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ. ಸುಂದರವಾದ ಮುತ್ತು ಒಮ್ಮೆ ಕೆಳಗೆ ಬಿದ್ದು ಹೊಡೆದು ಹೋದರೆ, ಮತ್ತೆ ಅದನ್ನು ಜೋಡಿಸಲು ಸಾಧ್ಯವಿಲ್ಲ. ಹಾಗೆಯೇ ಮಾತು ಎಂಬುದು ತುಂಬಾ ಸೂಕ್ಷ್ಮ ಒಮ್ಮೆ ಹಾಡಿದ ಮಾತನ್ನು ಮರಳಿ ಹಿಂಪಡೆಯಲು ಸಾಧ್ಯವಿಲ್ಲ. ಕತ್ತಿಯಿಂದ ಆದ ಗಾಯ ಮಾಸಿಹೋಗುತ್ತದೆ ಆದರೆ ಮಾತಿನಿಂದ ಆದ ಗಾಯ ಎಂದಿಗೂ ವಾಸಿಯಾಗುವುದಿಲ್ಲ. ಅದಕ್ಕಾಗಿ ಯಾವ ಸಮಯದಲ್ಲಿ ಮಾತನಾಡಬೇಕಾದರೂ ತುಂಬಾ ಜಾಗೃತೆಯಿಂದ ಯೋಚಿಸಿ ಮಾತನಾಡಿ. ನಿಮ್ಮ ಮಾತು ಮುತ್ತುಗಳ ಹಾಗೆ ಸುರಿಯಲಿ ಹಾಗೆ ಮಾತನಾಡುವುದು ನಿಮ್ಮ ವಾಕ್ ಚಾತುರ್ಯ ಇದನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
18. ಅಪಾಯ ಬಂದಾಗ ಉಪಾಯದಿಂದ ಗೆಲ್ಲಬೇಕು.
ವೇದ ಸುಳ್ಳಾಗಬಹುದು ಆದರೆ ಗಾದೆ ಸುಳ್ಳಾಗದು. ಎಂಬ ಮಾತು ಗಾದೆ ಮಾತಿನ ಮಹತ್ವವನ್ನು ಸಾರುತ್ತದೆ, ಗಾದೆಗಳು ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ತಮ್ಮ ಜೀವನಾನುಭವಗಳನ್ನು ಸಾರ ರೂಪದಲ್ಲಿ ಹಿಡಿದಿಟ್ಟಿರುವ ಚತುರೋಕ್ತಿಗಳಾಗಿವೆ. ಜೀವನದ ಪಯಣದಲ್ಲಿ ದಾರಿದೀಪದಂತೆ ಬೆಳಕು ಚೆಲ್ಲುವ ಹಲವಾರು ಗಾದೆಗಳಲ್ಲಿ ಈ ಮೇಲಿನ ಗಾದೆಯೂ ಒಂದಾಗಿದೆ.
ಜೀವನವೆಂದ ಮೇಲೆ ಹಲವಾರು ಕಷ್ಟಗಳು, ಸವಾಲುಗಳು, ಅಪಾಯಗಳು ಎದುರಾಗುವುದು ಸರ್ವೇಸಾಮಾನ್ಯ. ಅವು ನಮ್ಮ ಬದುಕಿನಲ್ಲಿ ಯಾವ ಸಮಯದಲ್ಲಿ ಹೇಗೆ ಬಂದು ಎರಗುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಬುದ್ಧಿವಂತನಾದವನು ಯಾವುದೇ ಸಮಸ್ಯೆಗಳು ಬಂದರೂ ಎದೆಗೊಂದದೆ ಜಾಣ್ಮೆಯಿಂದ ಅದಕ್ಕೆ ಪರಿಹಾರ ಹುಡುಕುತ್ತಾನೆ. ಅಪಾಯಗಳು ಎದುರಾದಾಗ ನಾವು ಭಯಬೀತರಾಗಬಾರದು, ಏಕೆಂದರೆ, ಭಯವು ನಮ್ಮ ವಿವೇಕವನ್ನು ಕಳೆದು ಹಾಕುತ್ತದೆ. “ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ಧೈರ್ಯ ವಹಿಸಿ ಸಮಾಧಾನದಿಂದ ಯೋಚಿಸಿದರೆ ಅಪಾಯವನ್ನು ಗೆಲ್ಲುವ ಉಪಾಯವು ಹೊಳೆಯುತ್ತದೆ. ಉದಾಹರಣೆಗೆ ಸಿಂಹ ಮತ್ತು ಮೊಲದ ಕಥೆ ನಮಗೆ ಗೊತ್ತಿದೆ, ದೊಡ್ಡ ದೊಡ್ಡ ಪ್ರಾಣಿಗಳು ಸಹ ಭಯದಿಂದ ಸಿಂಹದ ಬಾಯಿಗೆ ತುತ್ತಾದರೆ ಮೊಲವು ಅಲ್ಪ ಪ್ರಾಣಿಯಾದರೂ ಸಹ ತನ್ನ ಉಪಾಯದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳುತ್ತದೆ.
“ಶಕ್ತಿಗಿಂತ ಯುಕ್ತಿ ಮೇಲು”, ಎನ್ನುವಂತೆ ಅಪಾಯ ಬಂದಾಗ ಶಕ್ತಿಯನ್ನು ಬಳಸುವುದಕ್ಕಿಂತಲೂ ಉಪಾಯದಿಂದ ಪಾರಾಗಬೇಕು. “ಚತುರದ ಯುಕ್ತಿಯು ಸಾವಿರ ತೋಳ್ಬಲ ಕ್ಕಿಂತಲೂ ಮಿಗಿಲು” ಎಂದು ಸುಭಾಷಿತವಂದು ಹೇಳುತ್ತದೆ. ಬೀರಬಲ್ಲ, ತೆನಾಲಿ ರಾಮರು ತಮ್ಮ ಚತುರ ಬುದ್ದಿಯಿಂದಲೇ ತಮ್ಮ ಅರಸರಿಗೆ ಎದುರಾಗುವ ಸಂಕಷ್ಟಗಳಿಂದ ಅವರನ್ನು ಪಾರು ಮಾಡುತ್ತಿದ್ದರು. ಒಟ್ಟಿನಲ್ಲಿ ಸಮಸ್ಯೆಗಳು ಎದುರಾದಾಗ ಅಧೀರರಾಗದೆ ತಾಳ್ಮೆಯಿಂದ, ಚಾಣಾಕ್ಷತೆಯಿಂದ ಅದನ್ನು ಗೆಲ್ಲಬೇಕು ಎಂಬುದೇ ಈ ಗಾದೆಯ ತಿರುಳು.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
19. ಸಜ್ಜನರ ದುಃಖ, ದುರ್ಜನರ ಸಿರಿ ಶಾಶ್ವತವಲ್ಲ.
ಜನಪದ ಸಾಹಿತ್ಯದಲ್ಲಿ ಗಾದೆಗಳು, ವಿಶಿಷ್ಟ ಸ್ಥಾನವನ್ನು ಪಡೆದಿವೆ. ಒಂದೇ ಸಾಲಿನಲ್ಲಿ ಅಪಾರ ಅರ್ಥ ತುಂಬಿಕೊಂಡು ನೀತಿ ಬೋಧನೆ ಮಾಡಿ ಬದುಕನ್ನು ಹಸನುಗೊಳಿಸುವ ಈ ಲೋಕೋಕ್ತಿಗಳು ಹಿರಿಯರು ನಮಗಾಗಿ ಬಿಟ್ಟು ಹೋಗಿರುವ ಅಮೂಲ್ಯ ಆಸ್ತಿಗಳು. ಅಂತಹ ಅಸಂಖ್ಯಾ ನುಡಿಮುತ್ತುಗಳಲ್ಲಿ ಪ್ರಸ್ತುತ ಗಾದೆಯೂ ಒಂದಾಗಿದೆ.
ಈ ಗಾದೆಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗವು ಸಜ್ಜನರ ದುಃಖ ಶಾಶ್ವತವಲ್ಲ ಎಂದು ಹೇಳುತ್ತದೆ. ಸುಖ ದುಃಖಗಳು ಬರುವುದು ಸರ್ವೆ ಸಾಮಾನ್ಯ. “ಕಷ್ಟಗಳು ಮನುಷ್ಯನಿಗೆ ಬರದೆ ಬರಕ್ಕೆ ಬರುತ್ತದೆಯೇ?” ಒಳ್ಳೆಯವರಾಗಲಿ ಕೆಟ್ಟವರಾಗಲಿ, ಎಲ್ಲರಿಗೂ ಕಷ್ಟಗಳು ಬಂದೇ ಬರುತ್ತವೆ..ಆದರೆ ಸಜ್ಜನರು ಈ ಕಷ್ಟಗಳಿಗೆ ಹೆದರಿ ಎಂದಿಗೂ ದುಃಖಿಸುತ್ತಾ ಕೊಡುವುದಿಲ್ಲ. ಬರುವ ಸಂಕಟಗಳನ್ನು ಧೈರ್ಯದಿಂದ ಸಹಿಸಿಕೊಂಡು, ಸನ್ಮಾರ್ಗದಲ್ಲಿಯೇ ನಡೆಯುತ್ತಾರೆ. ನೋವಿರಲಿ ನಲಿವಿರಲಿ, ಯಾವುದನ್ನು ಅತಿಯಾಗಿ ಅಚ್ಚಿಕೊಳ್ಳದೆ ಸಮಚಿತ್ತದಿಂದ ಜೀವನ ಸಾಗಿಸುತ್ತಾರೆ. ಕಾಲ ಕಳೆದಂತೆ ಕಷ್ಟಗಳೆಲ್ಲ ದೂರವಾಗಿ ನೆಮ್ಮದಿಯು ಅವರನ್ನು ಅರಸಿಕೊಂಡು ಬಂದೇ ಬರುತ್ತದೆ. ಕತ್ತಲು ಕಳೆದ ಮೇಲೆ ಬೆಳಕು ಬರುವುದಿಲ್ಲವೇ ಹಾಗೆ.
ಇನ್ನೂ ಎರಡನೇ ಭಾಗವು, ದುರ್ಜನರ ಸಿರಿ ಶಾಶ್ವತವಲ್ಲ ಎಂದು ಹೇಳುತ್ತದೆ. ಸಮಾಜದಲ್ಲಿ ಸಾಮಾನ್ಯವಾಗಿ ಸಂಪತ್ತು ಒಳ್ಳೆಯವರಿಗಿಂತ ದುಷ್ಟರ ಬಳಿಯೇ ಹೆಚ್ಚಾಗಿರುವುದು ಕಂಡುಬರುತ್ತದೆ. ಅವರು ನೈತಿಕ ಮಾರ್ಗವನ್ನು ಬಿಟ್ಟು ಯಾರು ಯಾರಿಗೂ ಮೋಸ ಮಾಡಿ ಹಣ ಗಳಿಸಿ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಸಿರಿವಂತಿಕೆ ಬಂದೊಡನೆ ಗತ್ತಿನಲ್ಲಿ ತಿರುಗಾಡುತ್ತಾರೆ, ಎಲ್ಲರಿಗೂ ಕಣ್ಣು ಕುಕ್ಕುವಂತೆ ಮೆರೆಯುತ್ತಾರೆ. ಆದರೆ ಶ್ರಮ ಪಡದೆ ಗಳಿಸಿದ ಸಂಪತ್ತು ಎಂದಿಗೂ ಶಾಶ್ವತವಾಗಿ ಉಳಿಯಲಾರದು. ಕಷ್ಟಪಟ್ಟು ಗಳಿಸಿಲ್ಲದಿರುವುದರಿಂದ ಹಣದ ಬೆಲೆ ಅವರಿಗೆ ಗೊತ್ತಿರುವುದಿಲ್ಲ. ಅವರ ದುಶ್ಚಟಗಳು, ದುಂದು ವೆಚ್ಚಗಳಿಂದಾಗಿ ಗಳಿಸಿದ್ದಷ್ಟೇ ವೇಗವಾಗಿ ಅವರ ಸಂಪತ್ತು ಕರಗಿ ಹೋಗುತ್ತದೆ.
ಆದ್ದರಿಂದ ಹಣದಾಸೆಯಿಂದ ಕೆಟ್ಟ ದಾರಿ ಹಿಡಿಯದೆ ಸುಖವಿರಲಿ, ದುಃಖವಿರಲಿ ಸಜ್ಜನರಾಗಿದ್ದು ಸನ್ಮಾರ್ಗದಲ್ಲಿ ಧರ್ಮದ ರೀತಿಯಲ್ಲಿ ನಡೆದರೆ ಮಾತ್ರ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂಬ ಪಾಠವನ್ನು ಈ ಗಾದೆಯಿಂದ ಕಲಿತುಕೊಳ್ಳಬಹುದು.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
20. ಪಟ್ಟ ಆಳುವ ದೊರೆಗಿಂತ ಕೊಟ್ಟ ಕಟ್ಟುವ ತಾಯಿ ಲೇಸು.
ಕಿರಿಯರು ದಾರಿ ತಪ್ಪಿದಾಗ ಹಿರಿಯರು ಅನುಭವಿಗಳು ಅವರನ್ನು ತಿದ್ದಿ, ಬುದ್ಧಿ ಹೇಳಲು ಬಳಸುವ ಅತಿ ಪರಿಣಾಮಕಾರಿ ಸಾಧನಗಳೆಂದರೆ ಗಾದೆಗಳು. ಗಾದೆ ಮಾತುಗಳಲ್ಲಿ ಹಿರಿಯರ ಜೀವನಾನುಭವ ಹರಳುಗಟ್ಟಿದೆ. ನೈತಿಕ ಮೌಲ್ಯಗಳು ಸಾರಗೊಂಡಿವೆ. ಸಂಕ್ಷಿಪ್ತದಲ್ಲಿಯೇ ಸಮಗ್ರವನ್ನು ಹೇಳುವ ಈ ಗಾದೆಗಳು ನಾವಾಡುವ ಮಾತುಗಳಿಗೆ ಮೆರುಗನ್ನು ತಂದು ಕೊಡುತ್ತವೆ.
ಜಾನಪದರು, ತಾಯಿಯ ಮಹತ್ವವನ್ನು ಈ ಗಾದೆ ಮಾತಿನ ಮೂಲಕ ವಿವರಿಸಿದ್ದಾರೆ, ಕೆಲವರಿಗೆ ದೊರೆಯ ಕಣ್ಣಿಗೆ, ಬೀಳುವ ಹುಚ್ಚು. ಅಧಿಕಾರದಲ್ಲಿರುವವರ ಹಿಂದೆ ಮುಂದೆ ಬಾಲಂಗೋಚಿಗಳಂತೆ ಸುಳಿದಾಡುತ್ತಿರುತ್ತಾರೆ ಅದರಿಂದ ದೊರಕುವ ಲಾಭ ಮತ್ತು ಪ್ರಚಾರಕ್ಕಾಗಿ ಆ ಹಾತೊರೆಯುತ್ತಾರೆ ಆದರೆ ಅಧಿಕಾರಿ ಅಥವಾ ದೊರೆಯಾದವನು ತನ್ನ ಕೆಲಸ ಕಾರ್ಯಗಳಿಗೆ ಇಂತಹ ಹಿಂಬಾಲಕರನ್ನು ಬಳಸಿಕೊಂಡು ನಂತರ ಅವರನ್ನೇ ಶೋಷಣೆ ಮಾಡುವುದು ಅವರಿಗೆ, ಅರಿವಿಗೆ ಬರುವುದಿಲ್ಲ. ಯಾವಾಗ ಬೇಕಾದರೂ ದೊರೆಯ ಕೆಂಗಣ್ಣು ತನ್ನ ಜೊತೆಗಿರುವ ಇಂಥವರ ಮೇಲೆ ಬೀಳಬಹುದು, ಆದ್ದರಿಂದ ದೊರೆಯ ಕಣ್ಣಿನಿಂದ ಸಾಧ್ಯವಾದಷ್ಟು ದೂರ ಇರುವುದು ಮೇಲು.
ಆದರೆ ತಾಯಿ ಆಗಲ್ಲ, ಎಂತಹ ಕಷ್ಟದಲ್ಲಿ ತಾನು ಕೊರಗುತ್ತಿದ್ದರೂ ಮಕ್ಕಳಿಗೆ ಮಾತ್ರ ಸದಾ ಒಳಿತನ್ನೇ ಬಯಸುತ್ತಾಳೆ. ಸದಾ ಅವರ ಕ್ಷೇಮಕ್ಕಾಗಿ ಶ್ರಮಿಸುತ್ತಾಳೆ. ಮಕ್ಕಳ ಎಲ್ಲ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿ ಬಿಡುವ ಕ್ಷಮೆಯಾಧರಿತ್ರಿ ಆಕೆ. ಆದರೆ ಪಟ್ಟಣವನ್ನು ಆಳುವ ದೊರೆಯ ಕೈಗೆ ತಪ್ಪು ಮಾಡಿದವನು , ಸಿಕ್ಕಿದರೆ ಶಿಕ್ಷಸದೆ ಬಿಡುವನೇ, ತಾಯಿಗಾದರೆ ತನ್ನ ಕರುಳಿನ ಕುಡಿಗಳೆಂಬ ಮಮತೆಯಲ್ಲಿ ಯಾವುದು ದೊಡ್ಡ ತಪ್ಪಾಗಿ ತೋರುವುದಿಲ್ಲ. ಆದರೆ ದೊರೆಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ಅಲ್ಲವೇ. ತನ್ನ ಸ್ವಾರ್ಥ ಸಾಧನೆಗಾಗಿ ಅಧಿಕಾರಕ್ಕಾಗಿ ಯಾರನ್ನು ಬಲಿ ಕೊಡುವುದಕ್ಕೂ ಅವನು ಹಿಂಜರಿಯುವುದಿಲ್ಲ. ಆತನ ಸ್ನೇಹ, ವಿಶ್ವಾಸ ಎಂದಿಗೂ ಶಾಶ್ವತವಲ್ಲ ನಿರಂತರವಾಗಿ, ವಾತ್ಸಲ್ಯವನ್ನು ತೋರುವ ತಾಯಿ ಕೊಟ್ಟನ ಕುಟ್ಟಿ ಬದುಕುವವಳಾದರು ತನ್ನ ಮಕ್ಕಳನ್ನು ಕಡೆಗಣಿಸುವುದಿಲ್ಲ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ, ಎಂದು ಹೇಳಿರುವುದು ಅದಕ್ಕಾಗಿಯೇ. ಆದ್ದರಿಂದ ಪಟ್ಟಣ ಆಳುವ ದೊರೆಗಿಂತ ಕೊಟ್ಟಣ ಕುಟ್ಟುವ ತಾಯಿಯೇ ಲೇಸು ಎಂದು ಜನಪದರು ನೀತಿ ಹೇಳಿದ್ದಾರೆ.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ