100 ಗಾದೆ ಮಾತುಗಳು ಕನ್ನಡದಲ್ಲಿ | Gade Matugalu in Kannada|

ಗಾದೆ ಮಾತುಗಳು, ಗಾದೆಗಳು ವೇದಗಳಿಗೆ ಸಮಾನ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು, ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳನ್ನು ಐದನೆಯ ವೇದಗಳೆಂದು ಕರೆಯಲಾಗಿದೆ. 

ಗಾದೆ ಮಾತುಗಳು  ಎನ್ನುವುದು ಹೇಳಿಕೆಯ ರೂಪದಲ್ಲಿ, ಬಳಕೆಯಾಗುವ ಮಾತು. ಈ ಮಾತಿನಲ್ಲಿ ತಿಳುವಳಿಕೆ ಇದೆ, ನೀತಿ ಇದೆ, ಅಣಕವಿದೆ, ನಗೆ ಚಾಟಿಕೆ ಇದೆ, ಮಾನವ ಬದುಕಿನ ಒಳಿತು ಕೆಡುಕುಗಳನ್ನು ವಿಂಗಡಿಸಿ ತಿಳಿಸುವ ಜಾಣ್ಮೆಯಿದೆ. ವ್ಯಕ್ತಿಯ ಹಾಗೂ ಸಮಾಜದ ನಡವಳಿಕೆಯ ವಿಮರ್ಶೆ ಇದೆ. ಇವು ನಮ್ಮನ್ನು ಜೀವನದಲ್ಲಿ ಸರಿಯಾದ ದಾರಿಯಲ್ಲಿ ನಡೆಸಲು, ಮಾರ್ಗದರ್ಶನ ನೀಡುತ್ತವೆ.

ಗಾದೆ ಮಾತುಗಳು ಅನುಭವದಿಂದ ಬಂದಂತಹ ಮಾತುಗಳು, ಅದರಲ್ಲಿ ಲೋಕಾನುಭವದ ರಸಗಟ್ಟಿ ಇದೆ. ಕಾಲ ಕಳೆಯುತ್ತಿದೆ ವಿನಹ ಗಾದೆಗಳು ಅಮರವಾಗಿ ಉಳಿದಿವೆ. ಅವುಗಳಲ್ಲಿ ಅಂತಹ ಅನುಭವದ ಜ್ಞಾನ ತುಂಬಿ ತುಳುಕುತ್ತದೆ. ಇವು ದುರ್ಮಾರ್ಗಿಗಳನ್ನು ಸನ್ಮಾರ್ಗಕ್ಕೆ ತರುತ್ತವೆ. ಗಾದೆಗಳನ್ನು ಸೇರಿಸಿ ಮಾತನಾಡುವುದರಿಂದ ಮಾತಿಗೆ ಮೆರಗು ಬರುತ್ತದೆ. ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ಇರುವ ಗಾದೆಗಳನ್ನು ಯಾವ ಶಬ್ದಗಳು ಸೋಲಿಸುವುದಿಲ್ಲ ಹೀಗಾಗಿ ಮಾನವನ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿದೆ. ಶ್ರೀಸಾಮಾನ್ಯರ ಬದುಕಿನಲ್ಲಿ ಸುಖ, ಸಂತೋಷಪೂರ್ಣ ಬಾಳ್ವೆಗೆ ಸಹಾಯಕಾರಿಯಾಗಿದೆ. ಅಂದಿನಿಂದ ಇಂದಿನ ತನಕ ಇವು ನಿತ್ಯ ನೂತನವಾಗಿವೆ. 

ಗಾದೆ ಮಾತುಗಳು ಎಂದರೇನು?

ಗಾದೆ ಮಾತುಗಳು ಸಣ್ಣ ಸಂಕ್ಷಿಪ್ತ ವಾಕ್ಯಗಳ ಮೂಲಕ ವ್ಯಕ್ತಪಡಿಸುವ ಜಾನಪದ ಸಲಹೆಯಾಗಿದೆ ಹೆಚ್ಚಿನ ಗಾದೆಗಳು ಸ್ಥಳೀಯ ನಂಬಿಕೆಗಳು ಮತ್ತು ನಿರ್ದಿಷ್ಟ ಸ್ಥಳದ ಸಂಪ್ರದಾಯಗಳಿಗೆ ಸಂಬಂಧಿಸಿವೆ.

ಗಾದೆ ಮಾತುಗಳು, ಸಂಕ್ಷಿಪ್ತ ಮತ್ತು ಜನಪ್ರಿಯ ಹೇಳಿಕೆಗಳ ತುಣುಕುಗಳಾಗಿವೆ,. ಸಾಮಾನ್ಯವಾಗಿ ಪದಗುಚ್ಛದ ರೂಪದಲ್ಲಿ ನಿರ್ದಿಷ್ಟ ವಿಷಯವನ್ನು  ವಿವರಿಸಲು ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.  ಗಾದೆಗಳ ಬಗ್ಗೆ ಜ್ಞಾನವು ಮುಖ್ಯವಾಗಿದೆ. ಏಕೆಂದರೆ ಅದು ನಿಮ್ಮ ಶಬ್ದಕೋಶವನ್ನು ಹೆಚ್ಚಿಸುತ್ತದೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. 

ದೈನಂದಿನ ಸಂಭಾಷಣೆಗಳಲ್ಲಿ, ವ್ಯಾಪಕವಾಗಿ ಬಳಸಲಾಗುವ ನೂರು ಗಾದೆ ಮಾತುಗಳು ಕೆಳಗೆ ಪಟ್ಟಿಮಾಡಲಾಗಿದೆ. 

  1. ಕೈ ಕೆಸರಾದರೆ ಬಾಯಿ ಮೊಸರು.
  1. ಅತಿ ಆಸೆ ಗತಿ ಗೇಡು. 
  1. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
  1. ಹೊಳೆಗೆ  ಸುರಿದರೂ ಅಳೆದು ಸುರಿಯಬೇಕು. 
  1. ಹಾವು ಸಾಯ್ಬಾರದು ಕೋಲು ಮುರಿಬಾರ್ದು. 
  1. ಅಲ್ಪರ ಸಂಗ  ಅಭಿಮಾನ ಭಂಗ. 
  1. ದೇಶ ಸುತ್ತು, ಕೋಶ ಓದು. 
  1. ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ. 
  1. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
  1. ಬೆಳ್ಳಗಿರುವುದೆಲ್ಲ ಹಾಲಲ್ಲ.
  1. ಆಕಳು ಕಪ್ಪಾದ್ರೆ, ಹಾಲು ಕಪ್ಪೇನು.
  1. ಕಾರ್ಯವಾಸಿ ಕತ್ತೆ ಕಾಲು ಇಡಿ.
  1. ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ. 
  1. ವೇದ ಸುಳ್ಳಾದರು ಗಾದೆ ಸುಳ್ಳಾಗದು.
  1. ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು. 
  1. ಮಾಡಿದ್ದುಣ್ಣೋ ಮಹಾರಾಯ.
  1. ದೂರದ ಬೆಟ್ಟ ನುಣ್ಣಗೆ.
  1. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ.
  1. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ. 
  1. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು.
  1. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  1. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ. 
  1. ಬೇಲೀನೇ ಎದ್ದು ಹೊಲ ಮೇಯ್ದಂತೆ.
  1. ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತಿತ್ತು. 
  1. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ. 
  1. ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ. 
  1. ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಕ್ಕಾಕೊಂಡ 
  1. ಅಂದು ಬಾ ಅಂದ್ರೆ, ಮಿಂದು ಬಂದ. 
  1. ಆಡಿ ತಪ್ಪ ಬೇಡ ಓಡಿ  ಸಿಕ್ಕ ಬೇಡ.
  1. ಸಂಕಟ ಬಂದಾಗ ವೆಂಕಟರಮಣ.
  1. ಸುಳ್ಳು ದೇವರಿಗೆ ಕಳ್ಳ ಪೂಜಾರಿ.
  1. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
  1. ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೆ.
  1. ತಾಯಿಯಂತೆ ಮಗಳು, ನೂಲಿನಂತೆ ಸೀರೆ.
  1. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ.
  1. ಹೆತ್ತಮ್ಮನಿಗೆ ಹೆಗ್ಗಣವು ಮುದ್ದೆ .
  1. ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ. 
  1. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.
  1. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ.
  1. ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ.
  1. ನಾಯಿ, ಬೊಗಳಿದರೆ ದೇವಲೋಕ ಹಾಳೇನು.
  1. ನಾಯಿ ಬಾಲ ಡೊಂಕು.
  1. ಹಳೆ ಮನೆಗೆ ಹೆಗ್ಗಣ  ಸೇರಿಕೊಂಡಂಗೆ. 
  1. ಇಲಿ ಸಿಕ್ಕರೆ, ಬೆಕ್ಕು ಆಗುವುದು ಹುಲಿ.
  1. ಶಿವ ಪೂಜೆಯಲ್ಲಿ ಕರಡಿ ಬಿಟ್ಟಂಗೆ.
  1. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂಗೆ.
  1. ಬೆಕ್ಕು, ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
  1. ಹಂದಿ ತನ್ನ ಚಂದಕ್ಕೆ ಬೃಂದಾವನ ಆಡ್ಕೊಂತು.
  1. ಕೋತಿ ತಾನು ಕೆಡೋದಲ್ಲದೆ ವನಾನು ಕೆಡಿಸ್ತು.
  1. ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ.
  1. ಇಲಿಯಾಗಿ ನೂರು ದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು.
  1. ಬಿಳಿ ಆನೆ ಸಾಕಿದ ಹಾಗೆ.
  1. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು. 
  1. ಹಣ ಅಂದ್ರೆ ಹೆಣವು ಬಾಯಿ ಬಿಡುತ್ತದೆ.
  1. ಹಣ ಇಲ್ಲದವ ಎಡಕ್ಕಿಂತ ಕಡೆ. 
  1. ಹಾಳೂರಿಗೆ ಉಳಿದವನೇ ಗೌಡ.
  1. ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ. 
  1. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ.
  1. ಹಸಿದು, ಹಲಸಿನ ಹಣ್ಣು ತಿನ್ನು, ಉಂಡು ಮಾವಿನ ಹಣ್ಣು ತಿನ್ನು.
  1. ರಾಗಿಕಲ್ಲು ತಿರುಗುವಾಗ ಊರೆಲ್ಲ ನೆಂಟರು. 
  1. ಹೆಣ್ಣು ಚೆಂದ ಕಣ್ಣು ಕುರುಡ ಅಂದಂಗೆ.
  1. ಹೆಣ್ಣಿಗೆ ಹಠವಿರಬಾರದು, ಗಂಡಿಗೆ ಚಟವಿರಬಾರದು.
  1. ಹಿರಿಯಕ್ಕನ ಚಾಳಿ, ಮನೆ ಮಕ್ಕಳಿಗೆಲ್ಲ. 
  1. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. 
  1. ಕುಣಿಯಲಾರದವಳು ನೆಲ ಡೊಂಕು ಅಂದಳಂತೆ. 
  1. ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ.
  1. ಹೆಣ್ಣಿನ ಬಾಳು, ಕಣ್ಣೀರಿನ ಗೋಳು. 
  1. ಸಾವಿರ ಕೊಟ್ಟರೂ ಸವತಿ ಮನೆ ಬೇಡ. 
  1. ಸಾವಿರ ಕುದುರೆ ಸರದಾರ ಮನೆ ಹೆಂಡ್ತಿಗೆ ಪಿಂಜಾರ.
  1. ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ. 
  1. ಹೆಣ್ಣು ಜನ್ಮಕ್ಕೆ ಹೆಜ್ಜೆಗೊಂದು ಮುಳ್ಳು. 
  1. ಸಾವಿರ ಸುಳ್ಳು ಹೇಳಿ, ಒಂದು ಮದುವೆ ಮಾಡು. 
  1. ಮದುವೆ ಮಾಡಿನೋಡು ಮನೆ ಕಟ್ಟಿ ನೋಡು.
  1. ತಾಳಿಗೆ ಬೆಲೆ ಕೊಟ್ಟವಳು, ಗಂಡನಿಗೂ ಬೆಲೆ ಕೊಡ್ತಾಳೆ. 
  1. ಕನಸಲ್ಲಿ ತಾಳಿ ಕಟ್ಟಿ ಬೆಳಗಾದಮೇಲೆ ಹೆಂಡತಿ ಹುಡುಕಿದನಂತೆ. 
  1. ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಕೊಟ್ಟರಂತೆ. 
  1. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
  1. ಹಿಟ್ಟು ಅಳಸಿತ್ತು ನಾಯಿ ಹಸಿದಿತ್ತು.
  1.  ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ.
  1. ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ. 
  1. ಸಾಯೋ ಮುಂದೆ ಸಕ್ಕರೆ, ತುಪ್ಪ ತಿನ್ನಿಸಿದರಂತೆ. 
  1. ಸಾಯ್ತಿನಿ, ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ.
  1. ಅಕ್ಕ ಸತ್ತರೆ, ಅಮಾಸೆ ನಿಲ್ಲದು. 
  1. ಹುಟ್ಟುಗುಣ ಸುಟ್ಟರು ಹೋಗೋದಿಲ್ಲ. 
  1. ಮಾತು ಬೆಳ್ಳಿ, ಮೌನ ಬಂಗಾರ. 
  1. ಮಾತೇ ಮುತ್ತು ಮಾತೇ ಮೃತ್ಯು.
  1. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು. 
  1. ಮಾತು ಮನೆ ಮುರೀತು ತೂತು ಒಲೆ ಕೆಡಿಸಿತು. 
  1. ಇದ್ದದ್ದು ಇದ್ದಂಗೆ ಹೇಳಿದರೆ, ಎದ್ದು ಬಂದು ಎದೆಗೆ ಒದ್ದನಂತೆ. 
  1. ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ. 
  1. ಸಮಯಕ್ಕಾದವನೇ ನೆಂಟ ಕೆಲಸಕ್ಕಾದವನೇ ಬಂಟ.
  1. ಶೆಟ್ಟಿ ಸಾಲ ಸತ್ತ ಮೇಲೆ ತಿಳಿಯಿತು.
  1.  ಸಾಲಗಾರ ಸುಮ್ಮನಿದ್ದರೂ, ಸಾಕ್ಷಿದಾರ ಸುಮ್ಮನಿರಲ್ಲ. 
  1. ಹೂವಿನಿಂದ ನಾರು ಸ್ವರ್ಗ ಸೇರಿತು .
  1. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂಗೆ. 
  1. ಸಂಸಾರಿ ಸಹವಾಸ ಮಾಡಿ ಸನ್ಯಾಸಿ ಕೆಟ್ಟ. 
  1. ತುಂಬಿದ ಕೊಡ ತುಳುಕೋದಿಲ್ಲ. 
  1. ಸುಂಕದವನ ಹತ್ತಿರ  ಸುಖ-ದುಃಖ ಹೇಳ್ಕೊಂಡ ಹಾಗೆ. 
  1. ಹಗಲು ಅರಸನ ಕಾಟ ಇರುಳು ದೆವ್ವದ ಕಾಟ. 
  1. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು. 

ಮತ್ತಷ್ಟು ಓದಿ

ಕನ್ನಡ ರಾಜ್ಯೋತ್ಸವ 2023

ಒಂದು ಆ್ಯಪಲ್ ನಲ್ಲಿ ಎಷ್ಟು ಕ್ಯಾಲೊರಿಗಳಿರುತ್ತವೆ.

ಒಂದು ಇಂಚ್ ನಲ್ಲಿ ಎಷ್ಟು ಸೆಂಟಿಮೀಟರ್ ಗಳಿರುತ್ತವೆ

Leave a Comment