ತಾಳಿದವನು ಬಾಳಿಯಾನು ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ| Important Kannada Proverb “Talidavanu Baliyanu” Explaination.2024

ತಾಳಿದವನು ಬಾಳಿಯಾನು  ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ

ತಾಳಿದವನು ಬಾಳಿಯಾನು

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು, ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಇಂತಹ ಅಮೂಲ್ಯವಾದ ಅಗಣಿತ ಗಾದೆಮಾತುಗಳಲ್ಲಿ ತಾಳಿದವನು ಬಾಳಿಯಾನು ಎಂಬ ಗಾದೆಯೂ ಒಂದಾಗಿದೆ. 

ದುಡುಕು, ಕೋಪ, ಆತುರ ಮುಂತಾದವು, ಅನರ್ಥ ಸಾಧನಗಳು ಜೀವನದಲ್ಲಿ ಏಳುಬೀಳುಗಳು, ಕಷ್ಟಕಾರ್ಪಣ್ಯ, ಸುಖ-ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ ಆದರೆ ಅವು ಯಾವುವು ಶಾಶ್ವತವಲ್ಲ. ಬದುಕಿನಲ್ಲಿ ಎಂತಹ ಸಮಸ್ಯೆಗಳೇ ಇರಲಿ ಸ್ವಲ್ಪ ತಾಳ್ಮೆ ವಹಿಸಿದರೆ ಎಲ್ಲಾ ಕಷ್ಟಗಳು ದೂರವಾಗಿ ಸುಖವು ಬಂದೇ ಬರುತ್ತದೆ. ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು. ತಾಳ್ಮೆಯಿಂದ ಇರಬೇಕು ದಾಸರ ಮಾತಿನಂತೆ “ತಾಳುವಿಕೆಗಿಂತ ತಪವು ಇಲ್ಲ” ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಎರಡನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಅದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ

ನಿರ್ಧಾರವು ಭವಿಷ್ಯಕ್ಕೆ ಮಾರಕವಾಗಿರುತ್ತದೆ. ಪರಿಸ್ಥಿತಿಯನ್ನು ತಾಳ್ಮೆಯಿಂದ, ಧೈರ್ಯದಿಂದ ಎದುರಿಸಿದಾಗ ಬದುಕು ಗಟ್ಟಿಯಾಗುತ್ತಾ ಹೋಗುತ್ತದೆ. 

ಸಿಟ್ಟು ತಾಳ್ಮೆಯ ಶತ್ರು, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕೆಂದರೆ ಮೊದಲು ಸಿಟ್ಟನ್ನು ಗೆಲ್ಲಬೇಕು. ಕೋಪದಲ್ಲಿ ವಿವೇಕವನ್ನು ಕಳೆದುಕೊಂಡು ಏನಾದರೂ ಎಡವಟ್ಟು ಮಾಡಿಕೊಂಡರೆ ಅದನ್ನು ಸರಿಪಡಿಸುವುದು ಕಷ್ಟ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ.

ಆಧುನಿಕ ಜೀವನ ಶೈಲಿಯಲ್ಲಿ ಎಲ್ಲವೂ ಅವಸರಮಯವಾಗಿದೆ. ಆದರೆ ಅವಸರದಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು, ಒಂದು ಗಿಡಕ್ಕೆ ದಿನಕ್ಕೆ ಒಂದು ಸಲ ನೀರು ಹಾಕುವ ಬದಲು ಹತ್ತು ಸಲ ನೀರು ಹಾಕಿದರೆ ಅದು ಬೇಗ ಬೆಳೆದು ಫಲ  ಕೊಡುವುದೇ ? ಋತು ಬಂದಾಗಲೇ ಅದು ಫಲ ಕೊಡುವುದು. ಅಲ್ಲಿಯವರೆಗೆ ಕಾಯಲೇಬೇಕು ಆದ್ದರಿಂದ “ಅವಸರವೇ ಅಪಾಯಕ್ಕೆ ಕಾರಣ” ಎಂಬುದನ್ನು ಅರಿಯೋಣ ತಾಳ್ಮೆಯಿಂದ ಬದುಕಿ ನೆಮ್ಮದಿಯನ್ನು ಹೊಂದೋಣ.

Leave a Comment