ಒಗಟುಗಳು ಮತ್ತು ಉತ್ತರಗಳು
ಒಗಟು ಜನಪದ ಸಾಹಿತ್ಯದಲ್ಲಿ ಮುಖ್ಯವಾದ ಒಂದು ಪ್ರಕಾರ. ಒಗಟುಗಳನ್ನು ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡುವ ಸವಾಲು ಅಥವಾ ಸಮಸ್ಯೆ. ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆವ್ಯಕ್ತ ವಸ್ತುವನ್ನು ಕಂಡು ಹಿಡಿಯುವಂತೆ ಹೇಳುವುದು, ಒಗಟಿನ ಕ್ರಮ.
ಒಗಟಿನಲ್ಲಿ ಎರಡು ಸದೃಶ ವಸ್ತುಗಳಿರಬೇಕು, ಒಂದು ಉಪಮಾನ ಮತ್ತೊಂದು ಉಪಮೇಯ ಇದರಲ್ಲಿ ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ, ಮತ್ತು ಉಪಮಾನ ವಾಚ್ಯವಾಗಿರುತ್ತದೆ .ಇಲ್ಲಿ ಉಪಮಾನದ ಆಧಾರದಿಂದ ಉಪಮೇಯವನ್ನು, ಪತ್ತೆ ಮಾಡಬೇಕಾಗುತ್ತದೆ ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.
ಒಗಟುಗಳು ಮತ್ತು ಉತ್ತರಗಳು
ನೀರಲ್ಲೇ ಹುಟ್ಟುತ್ತದೆ, ನೀರಲ್ಲೇ ಬೆಳೆಯುತ್ತದೆ, ನೀರಲ್ಲೇ ಸಾಯುತ್ತದೆ – ಉಪ್ಪು
ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ – ಮಲ್ಲಿಗೆ ಹೂ
ಹಗ್ಗ ಹಾಸಿದೆ, ಹಸು ಮಲಗಿದೆ – ಕುಂಬಳಕಾಯಿ
ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ
ಐದು ಮನೆಗೆ ಒಂದೇ ಅಂಗಳ – ಅಂಗೈ
ಗೂಡಿನಲ್ಲಿನ ಪಕ್ಷಿ, ನಾಡೆಲ್ಲ ನೋಡುತ್ತದೆ – ಕಣ್ಣು
ಒಂದು, ಹಪ್ಪಳ ಊರಿಗೆಲ್ಲಾ ಊಟ– ಚಂದ್ರ
ಅಂಗೈ ಕೊಟ್ಟರೆ ಮುಂಗೈನು ನುಂಗುತ್ತದೆ – ಬಳೆ
ಬೆಳ್ಳಿ ಸಮುದ್ರದಲ್ಲಿ, ಕಪ್ಪು ಸೂರ್ಯ – ಕಣ್ಣು
ಅಂಗಡಿಯಿಂದ ತರೋದು, ಮುಂದಿಟ್ಟುಕೊಂಡು ಅಳೋದು – ಈರುಳ್ಳಿ
ಅಂಗಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ – ಬಾಳೆಹಣ್ಣು
ಗೂಡಿನಲ್ಲಿರುವ ಜೋಡಿ ಪಕ್ಷಿ ಊರೆಲ್ಲಾ ನೋಡುತ್ತದೆ – ಕಣ್ಣು
ಒಂದು ಹಸ್ತಕ್ಕೆ ನೂರೆಂಟು ಬೆರಳು – ಬಾಳೆಗೊನೆ
ಬಿಡಿಸಿದರೆ ಹೂವು, ಮುದುಡಿದರೆ ಮೊಗ್ಗು, ನಾನು ಯಾರು? – ಛತ್ರಿ
ಒಬ್ಬಳು ಮಲಗಿದಳು, ಒಬ್ಬಳು ಕರಗಿದಳು, ಒಬ್ಬಳು ತೇಲಿದಳು – ಎಲೆ, ಅಡಿಕೆ, ಸುಣ್ಣ.
ಊರಿಗೆಲ್ಲಾ ಒಂದೇ ಕಂಬಳಿ – ಆಕಾಶ
ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ – ಕುಂಕುಮ
ಕರಿ ಹೊಲದ ಮಧ್ಯದಲ್ಲಿ ಬಿಳಿ ದಾರಿ-ಬೈತಲೆ
ಕಣ್ಣಿಗೆ ಹತ್ತಿರ ಕಾಲಿಗೆ ದೂರ – ಬೆಟ್ಟ
ಕಣ್ಣಿಗೆ ಕಾಣೋದಿಲ್ಲ ಕೈಗೆ ಸಿಗೋದಿಲ್ಲ – ಗಾಳಿ
ಒಗಟುಗಳು ಮತ್ತು ಉತ್ತರಗಳು
ಮನೆ ಮೇಲೆ, ಮಲ್ಲಿಗೆ ಹೂವು – ಮಂಜು
ಹಾರಿದರೆ ಹನುಮಂತ ಕೂಗಿದರೆ ಶಂಖ – ಕಪ್ಪೆ
ಕಾಸಿನ ಕುದುರೆಗೆ ಬಾಲದ ಲಗಾಮು – ಸೂಜಿ ದಾರ
ಸುತ್ತ ಮುತ್ತ ಸುಣ್ಣದ ಗೋಡೆ ಎತ್ತ ನೋಡಿದರೂ ಬಾಗಿಲಿಲ್ಲ, ಇದು ಏನು? – ಮೊಟ್ಟೆ
ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ – ಬದನೆಕಾಯಿ
ಸಾಗರ ಪುತ್ರ ಸಾರಿನ ಮಿತ್ರ – ಉಪ್ಪು
ಗುಡುಗು ಗುಡುಗಿದರೆ ಸಾವಿರ ನಯನಗಳು ಅರಳುವುದು – ನವಿಲು
ಹೊಂಚು ಹಾಕಿದ ದೆವ್ವ ಬೇಡ ಬೇಡ ಎಂದರು ಜೊತೆಯೇ ಬರುತ್ತೆ – ನೆರಳು
ಮೇಲೆ ನೋಡಿದರೆ, ನಾನಾ ಬಣ್ಣ ಉಜ್ಜಿದರೆ ಒಂದೇ ಬಣ್ಣ – ಸಾಬೂನು
ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ – ಬಾಳೆಹಣ್ಣು
ಉರುಂಟು ಜನರಿಲ್ಲ, ನದಿಯುಂಟು ನೀರಿಲ್ಲ– ಭೂಪಟ
ಚೋಟುದ್ದ ಹುಡುಗಿಗೆ ಮಾರುದ್ದ ಜಡೆ – ಸೂಜಿದಾರ
ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ – ದೀಪದ ಬೆಳಕು
ಹಳ್ಳಿ ಗಡಿಯಾರ ಒಳ್ಳೆ ಆಹಾರ – ಕೋಳಿ
ನನ್ನ ಕಂಡರೆ ಎಲ್ಲರೂ ಓದಿತಾರೆ – ಚೆಂಡು
ನೀರು ಇರುತ್ತೆ, ನದಿ ಅಲ್ಲ ಬಾಗಿಲು ಇರುತ್ತೆ, ಮನೆ ಅಲ್ಲ– ಕಣ್ಣು
ಬಿಳಿ ಕುದುರೆಗೆ ಹಸಿರು ಬಾಲ – ಮೂಲಂಗಿ
ಒಗಟುಗಳು ಮತ್ತು ಉತ್ತರಗಳು
ಅಪ್ಪನ ದುಡ್ಡು ಎಣಿಸೋಕಾಗಲ್ಲ, ಅವ್ವನ ಸೀರೆ ಮಡಿಸೋಕಾಗಲ್ಲ – ನಕ್ಷತ್ರ ಆಕಾಶ
ನೀರುಂಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ– ತೆಂಗಿನಕಾಯಿ
ಬಿಳಿ ಹುಡುಗನಿಗೆ ಕರಿ ಟೋಪಿ – ಬೆಂಕಿ ಕಡ್ಡಿ
ಒಬ್ಬಣ್ಣ ಇಳಿಯುತ್ತಾನೆ ಒಬ್ಬಣ್ಣ ಹತ್ತುತ್ತಾನೆ – ರೊಟ್ಟಿ
ಒಕ್ಕೂವಾಗ ಒಂದು ಹೊರಟಾಗ ನೂರು – ಶಾವಿಗೆ
ಊರಿಗೆಲ್ಲ ಒಂದೇ ಕಂಬ್ಳಿ– ಆಕಾಶ
ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ಬೆನ್ನು ತೋಳುಂಟು ಮನುಷ್ಯರಲ್ಲ– ಕುರ್ಚಿ
ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು 12 ಮಂದಿಗೆ ಬಡಿಸಿರ್ತಾನೆ – ಗಡಿಯಾರ
ಗರಿಕೆ ಆಸೆ ದೇವರು, ವರ್ಷಕ್ಕೊಮ್ಮೆ ಬರ್ತಾನೆ – ಗಣಪತಿ
ಮಣ್ಣಿನಲ್ಲಿ ಹುಟ್ಟಿ, ಮಣ್ಣಿನಲ್ಲಿ ಬೆಳೆದು, ಮಣ್ಣಿನಲ್ಲಿ ಸಾಯುವುದು – ಮಡಿಕೆ
ಹೋದ ನೆಂಟ ಬಂದ ನೆಂಟ ಬಂದ ದಾರಿ ಗೊತ್ತಿಲ್ಲ – ನೆರಳು
ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ – ಬುಗುರಿ
ಹಸಿರು ಕೋಲಿಗೆ, ಮುತ್ತಿನ ತುರಾಯಿ – ಜೋಳದ ತೆನೆ
ಒಗಟುಗಳು ಮತ್ತು ಉತ್ತರಗಳು
ಅಪ್ಪನಿಗಿಂತ ಮಗನೇ ಮೊದಲು ಹುಟ್ಟುತ್ತಾನೆ – ಹೋಗೆ
ಎರಡು ಗವಿಗಳಿಗೆ ಒಂದೇ ಗೋಡೆ – ಮೂಗುತಿ
ಹೋದರು ಇರುತ್ತೆ, ಬಂದರೂ ಕಾಡುತ್ತೆ, ಇದು ಏನು – ನೆನಪು
ಚಿಕ್ಕ ಮನೆ ತುಂಬಾ ಚೆಕ್ಕೆ ತುಂಬಿದೆ – ಬಾಯಿ ಹಲ್ಲು
ಅಂಕು ಡೊಂಕದ ಬಾವಿ ಬಗ್ಗಿ ನೋಡಿದರೆ ನೀರಿಲ್ಲ – ಕಿವಿ
ಕಿರೀಟವುಂಟು ರಾಜನಲ್ಲ ಗಡ್ಡವುಂಟು ತುರುಕನಲ್ಲ – ಹುಂಜ
ಹತ್ತಲಾರದ ಮರ ಎಣಿಸಲಾರದ ಕಾಯಿ – ರಾಗಿ ಗಿಡ
ಚಿನ್ನದ ಪೆಟ್ಟಿಗೆಯಲ್ಲಿ, ಬೆಳ್ಳಿ ಲಿಂಗ – ಹಲಸಿನ ಹಣ್ಣು, ಬೀಜ
ಒಗಟುಗಳು ಮತ್ತು ಉತ್ತರಗಳು
ಒಂದು ಮಡಿಕೆ ಮಡಿಕೆಯೊಳಗೆ ಕುಡಿಕೆ ಕುಡಿಕೆಯಲ್ಲಿ ಸಾಗರ – ತೆಂಗಿನಕಾಯಿ
ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ – ಹುಣಸೆಹಣ್ಣು
ನೀಲಿ ಕೆರೆಯಲ್ಲಿ ಬಿಳಿ ಮೀನು – ನಕ್ಷತ್ರ
ಬಾ ಅಂದರೆ ಬರೋಲ್ಲ ಹೋಗು ಅಂದರೆ ಹೋಗಲ್ಲ– ಮಳೆ
ನಾ ಇರುವಾಗ ಬರುತ್ತೆ, ನಾ ಹೋದ ಮೇಲೂ ಇರುತ್ತೆ – ಕೀರ್ತಿ
ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ – ಕಣ್ಣು
ಅಕ್ಕನ ಮೇಲೆ ಛತ್ರಿ – ರೆಪ್ಪೆ
ಅಮ್ಮನ ಆಕಾಶವಾಣಿ ನಾನು – ಮಗು
ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ – ಭೂಪಟ
ಒಂದು ಮನೆಗೆ ಒಂದೇ ತೊಲೆ – ತಲೆ
ಮೂರು ಕಾಸಿನ ಕುದುರೆಗೆ ಮೂನ್ನೂರು ರೂಪಾಯಿಯ ಹಗ್ಗ – ಹೇನು,ಕೂದಲು
ಅಪ್ಪ ಆಕಾಶಕ್ಕೆ, ಅವ್ವ ಪಾತಾಳಕ್ಕೆ, ಮಗ ವ್ಯಾಪಾರಕ್ಕೆ, ಮಗಳು ಮದುವೆಗೆ – ಅಡಿಕೆ
ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಾಗಿದೆ, ಮಳೆ ಇಲ್ಲ, ಬೆಳೆ ಇಲ್ಲ ಮೈ ಹಸಿರಾಗಿದೆ – ಗಿಳಿ
ಅಂಗಳದಲ್ಲಿ ಹುಟ್ಟುವುದು ಅಂಗಳದಲ್ಲಿ ಬೆಳೆಯುವುದು ತನ್ನ ಮಕ್ಕಳ ಹಂಗಿಸಿ ಮಾತನಾಡುವುದು ಇದು ಏನು? – ಕೋಳಿ
ಇದ್ದಲು ನುಂಗೊತ್ತಾ, ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ, ಮುಂದಕ್ಕೆ ಸಾಗುವ ನಾನ್ಯಾರು?- ರೈಲು
ಊಟಕ್ಕೆ ಹುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಷ್ಟರಲ್ಲಿ, ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ – ಗಡಿಯಾರ
ಕಡಿದರೆ, ಕಚೋಕೆ ಆಗಲ್ಲ ಹಿಡಿದರೆ ಮುಟ್ಟುವುದಕ್ಕೆ ಸಿಗೋಲ್ಲ – ನೀರು
ಒಗಟುಗಳು ಮತ್ತು ಉತ್ತರಗಳು
ಒಂದು ರುಮಾಲು ನಮ್ಮಪ್ಪನು ಸುತ್ತಲಾರ – ದಾರಿ
ಸಾವಿರಾರು ಹಕ್ಕಿಗಳು ಒಂದೇ ಬಾರಿಗೆ ನೀರಿಗೆ ಇಳಿಯುತ್ತವೆ – ಅಕ್ಕಿ
ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬಾ ಮರಿಗಳು – ಕೋಳಿ
ಮೋಟು ಗೋಡೆ ಮೇಲೆ ದೀಪ ಉರೀತಿದೆ – ಮೂಗುಬೊಟ್ಟು
ಕೈಲಿದ್ದಾಗ ಗುಡಿಸಾಡುತ್ತೇವೆ, ಕೈ ಬಿಟ್ಟಾಗ ಗೊರಕೆ ಹೊಡೆಯುತ್ತೇನೆ – ಕಸಪೊರಕೆ
ಗಿಡ ಕೊಡಲಾರದು, ಮರ ಬೆಳೆಸಲಾರದು, ಅದಿಲ್ಲದೆ ಊಟ ಸೇರಲಾರದು – ಉಪ್ಪು
ಒಬ್ಬನನ್ನು ಹಿಡಿದರೆ, ಎಲ್ಲರ ಮರ್ಜಿಯು ಗೊತ್ತಾಗುತ್ತದೆ – ಅನ್ನದ ಅಗುಳು
ಒಂದು ಕೊಂಬಿನ ಗೂಳಿ, ಅದರ ತಲೆಯೆಲ್ಲಾ ಮುಳ್ಳು – ಬದನೆಕಾಯಿ
ಕೊಳದ ಒಳಗೆ ಒಂದು ಮರ ಹುಟ್ಟಿ, ಬೇರು ಇಲ್ಲ, ನೀರು ಇಲ್ಲ – ಎಣ್ಣೆ, ದೀಪ
ನೋಡಿದರೆ ನೋಟಗಳು, ನಕ್ಕರೆ ನಗುಗಳು, ಒಡೆದರೆ ತುಂಡುಗಳು – ಕನ್ನಡಿ
ವನದಲ್ಲಿ ಹುಟ್ಟಿ, ವನದಲ್ಲಿ ಬೆಳೆದು, ವನದಿಂದ ಹೊರಟು, ವನಜಲೋನೆ ಶಿರಕ್ಕೆರುವರು – ಕಮಲ
ಕಲ್ಲು ಕೋಳಿ ಕೂಗುತ್ತದೆ, ಮಲ್ಲ ಚೂರಿ ಹಾಕುತ್ತಾನೆ – ಗಿರಣಿ
ಸಾವಿರ ತರುತ್ತೆ, ಲಕ್ಷ ತರುತ್ತೆ, ನೀರಿನಲ್ಲಿ ಹಾಕಿದರೆ ಸಾಯುತ್ತೆ – ದುಡ್ಡು
ತಕ್ಕಡಿಯಲ್ಲಿ ಇಟ್ಟು ಮಾರೋಹಾಗಿಲ್ಲ, ಅದಿಲ್ಲದೆ ಹಬ್ಬ ಆಗೋ ಹಾಗಿಲ್ಲ – ಸಗಣಿ
ಕರಿಗುಡ್ಡ, ಬಿಳಿ ನೀರು ಅದ್ರಾಗೆ ಕುಂತವಳೇ ಚಂಪಾರಾಣಿ – ಗಡಿಗೆ ಮಜ್ಜಿಗೆ
ಒಗಟುಗಳು ಮತ್ತು ಉತ್ತರಗಳು
ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡ ಇದೆ ಕಾಲಿಲ್ಲ – ಅಂಗಿ
ಅಂಗೈ ಅಗಲದ ರೊಟ್ಟಿಗೆ, ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ – ಆಕಾಶ, ನಕ್ಷತ್ರ
ಸುಟ್ಟ ಹೆಣ ಮತ್ತೆ ಸುಡ್ತಾರೆ – ಇದ್ದಿಲು
ತಮ್ಮಂಗೆ ಮೂರು ಕಣ್ಣು, ಅಮ್ಮಂಗೆ ಒಂದೇ ಕಣ್ಣು – ,ತೆಂಗಿನಕಾಯಿ
ಕೆಂಪು ಕುದುರೆಗೆ ಲಗಾಮು, ಒಬ್ಬ ಹತ್ತುತ್ತಾನೆ, ಇನ್ನೊಬ್ಬ ಇಳಿಯುತ್ತಾನೆ – ಬೆಂಕಿ, ಬಾಣಲೆ, ದೋಸೆ
ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ – ಮನುಷ್ಯನ ಹುಟ್ಟು, ಮಗು
ಕಲ್ಲರಳಿ, ಹೂವಾಗಿ ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ, ಬೆಳಕಾಗಿ ಬಲ್ಲವರು ಹೇಳಿ – ಸುಣ್ಣ
ಹೋಗುತ್ತಾ ಬರುತ್ತಾ ಇರುವುದು ಎರಡು. ಹೋದ ಮೇಲೆ ಬರಲಾರವು ಎರಡು – ಸಿರಿತನ- ಬಡತನ, ಪ್ರಾಣ – ಮಾನ
ಎಲ್ಲರ ಮನೆ, ಅಜ್ಜಿಗೆ ಮೈಯೆಲ್ಲಾ ಕಜ್ಜಿ – ಜರಡಿ
ಅವ್ವ ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ – ಬಾಯಿ
ಮತ್ತಷ್ಟು ಓದಿ