ಗಾಂಧಿ ಜಯಂತಿ ಭಾಷಣ |Gandhi Jayanthi Impressive Speech in Kannada 2023

ದೇಶದಲ್ಲಿ ಪ್ರತಿವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ. ಗಾಂಧೀಜಿ ಅವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾಗಿದ್ದರು, ಅವರು ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಮೂಲಕ ಬ್ರಿಟಿಷ್ ಸರ್ಕಾರವನ್ನು ಅನೇಕ ಬಾರಿ ಮಂಡಿಯುರುವಂತೆ ಮಾಡಿದರು. ಸತ್ಯ ಮತ್ತು ಅಹಿಂಸೆಯ ತತ್ವಗಳು ಅವರ ಶಕ್ತಿಯಾಗಿದ್ದವು. ಒಬ್ಬರ ಹಕ್ಕುಗಳನ್ನು ಅಹಿಂಸಾ ಮಾರ್ಗದಿಂದ ಹೇಗೆ ಸಾಧಿಸಬಹುದು ಎಂಬುದಕ್ಕೆ ಅವರು ಇಡೀ ಜಗತ್ತಿಗೆ ಅದ್ಭುತ ಉದಾಹರಣೆ ನೀಡಿದರು.ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಮತ್ತು ಪ್ರಬಂಧ ಬರಹದಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ನಾವು ವಿದ್ಯಾರ್ಥಿಗಳಿಗೆ ಗಾಂಧಿ ಜಯಂತಿ ಕುರಿತು ವಿವಿಧ ಪದಗಳ ಮಿತಿಗಳೊಂದಿಗೆ ಸುಲಭ ಮತ್ತು ಸರಳ ಪದಗಳಲ್ಲಿ ಭಾಷಣವನ್ನು ನೀಡುತ್ತಿದ್ದೇವೆ, ಇದನ್ನು ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸಂದರ್ಭಗಳಲ್ಲಿ ಅಥವಾ ಸ್ಪರ್ಧೆಗಳಲ್ಲಿ ಬಳಸಬಹುದು.

ಗಾಂಧಿ ಜಯಂತಿ ಕುರಿತು ಭಾಷಣ (ಕನ್ನಡದಲ್ಲಿ ಗಾಂಧಿ ಜಯಂತಿ ಕುರಿತು ಸಣ್ಣ ಮತ್ತು ದೀರ್ಘ ಭಾಷಣ) 

ಗಾಂಧಿ ಜಯಂತಿ ಭಾಷಣ -1

ಎಲ್ಲರಿಗೂ ಶುಭೋದಯ! ನನ್ನ ಹೆಸರು (ನಿಮ್ಮ ಹೆಸರು),ನಾವು ಮಹಾತ್ಮ ಗಾಂಧಿಯವರ ಜನ್ಮದಿನವನ್ನು, ಆಚರಿಸಲು ಇಲ್ಲಿ ಸೇರಿದ್ದೇವೆ.ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲು ಮತ್ತು ನಮ್ಮ ಸ್ವಾತಂತ್ರ ಹೋರಾಟಗಾರ ಮತ್ತು ನಾಯಕ ಮಹಾತ್ಮ ಗಾಂಧಿಯವರು ಇಂದಿಗೂ ನಮ್ಮನ್ನು ಮುನ್ನೆಡೆಸಿದ ತತ್ವಗಳನ್ನು ಗೌರವಿಸಲು ಭಾರತವು ಗಾಂಧಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತದೆ. ಈ ವರ್ಷ ನಾವು ನಮ್ಮ ರಾಷ್ಟ್ರದ ಪಿತಾಮಹ ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರ 154 ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ, ಅವರನ್ನು ವಿಶೇಷವಾಗಿ ಮಕ್ಕಳು, ಬಾಪು ಎಂದು ಕರೆಯುತ್ತಾರೆ.

ಅವರು ಮೊದಲು ದಕ್ಷಿಣ  ಆಫ್ರಿಕಾದಲ್ಲಿ ಜನಾಂಗೀಯ ಅನ್ಯಾಯದ  ವಿರುದ್ಧ ಹೋರಾಟ ಮಾಡಿದರು.  ನಂತರ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು, ಅನುಸರಿಸಿ ನಮ್ಮ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದರು. ಅವರು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಭಾರತ ಬಿಟ್ಟು ತೊಲಗಿ ಚಳುವಳಿ ಮುಂತಾದ ಅನೇಕ ಯಶಸ್ವಿ ಚಳುವಳಿಗಳನ್ನು ನಡೆಸಿದರು. ಇವೆಲ್ಲವನ್ನು ಅವರು ಅಹಿಂಸೆಯ ಮಾರ್ಗದಲ್ಲಿ  ನಡೆಸಿದರು.ಭಾರತ ಸ್ವಾತಂತ್ರ್ಯವನ್ನು ಪಡೆಯಲು ನಿರಂತರವಾಗಿ ಶ್ರಮಿಸಿದರು ಮತ್ತು 200 ವರ್ಷಗಳ ನಂತರ ನಮ್ಮನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಿದರು.ವಿಶೇಷವಾಗಿ ಅವರು ಹಿಂದುಳಿದ ವರ್ಗದ  ಜನರ ಹಕ್ಕುಗಳನ್ನು ಸುಧಾರಿಸಲು ಉತ್ತೇಜಿಸಿದರು. ಮತ್ತು ಭಾರತೀಯ ಸಮಾಜದಿಂದ ಅಸ್ಪೃಶ್ಯತೆ ತೊಡೆದು ಹಾಕಲು ಶ್ರಮಿಸಿದರು. 

ಗಾಂಧೀಜಿಯವರು ಕನಿಷ್ಠ ವಸ್ತುಗಳೊಂದಿಗೆ ಸರಳ ಜೀವನಕ್ಕೆ ಆದ್ಯತೆ ನೀಡಿದರು ಮತ್ತು ಸ್ವಚ್ಛತೆಯ ತೀವ್ರ  ಪರಿಪಾಲಕರಾಗಿದ್ದರು. ನಮ್ಮ  ಸರ್ಕಾರವು ಅವರ ಹೆಸರಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ನಡೆಸುತ್ತದೆ, ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಪ್ರೋತ್ಸಾಹಿಸುತ್ತಿದ್ದಾರೆ. ಹೆಸರಾಂತ ನಾಯಕರಾಗಿದ್ದರು ಅವರು ಯಾವಾಗಲೂ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದರು. ಇದು ಅವರ ಸರಳವಾದ ಜೀವನವನ್ನು ಸಂಕೇತಿಸುತ್ತದೆ. ಇದು ಅವರ ಜೀವನ ಕಲ್ಪನೆ ಗಳಲ್ಲಿ ಒಂದಾಗಿದೆ. ಬಿಡುವಿನ ವೇಳೆಯಲ್ಲಿ ಚರಕದಿಂದ  ಖಾದಿ ನೇಯುತಿದ್ದರು.

ಅವರು ತಪಸ್ವಿಯಂತೆ ಬದುಕುತ್ತಿದ್ದರು ಮತ್ತು ತಮ್ಮ ದೈನಂದಿನ ದಿನಚರಿಯಲ್ಲಿ, ಕನಿಷ್ಠ ವಸ್ತುಗಳನ್ನು ಬಳಸುತ್ತಿದ್ದರು. ಗಾಂಧೀಜಿ ಭಾರತೀಯ ಸಾಂಪ್ರದಾಯಿಕ ಸಂಸ್ಕೃತಿಯನ್ನು ಆಳವಾಗಿ ಗೌರವಿಸುತ್ತಿದ್ದರು ಮತ್ತು ಹೆಮ್ಮೆ ಪಡುತ್ತಿದ್ದರು. ಅವರು ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟಿದ್ದರು ಮತ್ತು ಯಾವುದೇ ಭೇದ ಭಾವವಿಲ್ಲದೆ ತಮ್ಮ ದೇವರುಗಳನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಿದರು.

ಗಾಂಧೀಜಿಯವರು ಜನವರಿ 30, 1948ರಂದು ತಮ್ಮ ಕೊನೆಯ ಉಸಿರೆಳೆದರು ಮತ್ತು ಅವರ ಕೊನೆಯ ಮಾತುಗಳಾಗಿ “ಹೇ ರಾಮ್” ಎಂದು ಉಚ್ಚರಿಸಿದರು. ಅವರನ್ನು ನಾಥುರಾಮ್ ಗೋಡ್ಸೆ  ಹತ್ಯೆ ಮಾಡಿದನು. ಅವರ ಸಮಾಧಿಯನ್ನು ದೆಹಲಿಯ ರಾಜ್ ಘಾಟ್ ನಲ್ಲಿ ನಿರ್ಮಿಸಲಾಗಿದೆ.ಈ ದಿನದಂದು ಸಾವಿರಾರು ಜನರು ರಾಜ್ ಘಾಟ್ ನಲ್ಲಿ ಸೇರಿ, ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡುತ್ತಾರೆ ಮತ್ತು ಅವರ ನೆಚ್ಚಿನ ಹಾಡು ರಘುಪತಿ ರಾಘವ್ ರಾಜಾರಾಮ್ ಹಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಭಾರತದ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಪ್ರಮುಖ ನಾಯಕರು  ಗಾಂಧಿ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ರಾಜ ಘಟ್ ಗೆ ಹೋಗುತ್ತಾರೆ.

ಅವರು ಸರಳ ಜೀವನ ಮತ್ತು ಉನ್ನತ ಕಾರ್ಯಗಳಲ್ಲಿ ನಂಬಿಕೆ ಇಟ್ಟಿದ್ದರು. “ನನ್ನ ಜೀವನವೇ, ನನ್ನ ಸಂದೇಶ” ಎಂಬ ಅವರ ಜೀವನದ ಧೇಯವಾಕ್ಯವು ಇದೆ ವಿಚಾರಗಳನ್ನು ಸಾರಿತು. ಅಹಿಂಸೆಯ ತತ್ವವನ್ನು ತೋರಿಸಲು ಅವರು ಒಮ್ಮೆ ‘ಕಣ್ಣಿಗೆ ಕಣ್ಣು ಇಡೀ ಜಗತ್ತನ್ನು ಕುರುಡಾಗಿಸುತ್ತದೆ’ ಎಂದು ಹೇಳಿದರು. ಅವರ ಜೀವನ ಸಂದೇಶಗಳು ಭಾರತೀಯರ ಮೇಲೆ ಅಪಾರ ಪ್ರಭಾವ ಬೀರಿತು. ಮಾತ್ರವಲ್ಲದೆ ಇಡಿ ಜಗತ್ತನ್ನು ಮಾನವೀಯತೆಯ ಧರ್ಮದಲ್ಲಿ ನಂಬಿಕೆ ಇಡುವಂತೆ ಪ್ರೇರೇಪಿಸಿತು.

2023ರ ಗಾಂಧಿ ಜಯಂತಿಯ ಈ ದಿನದಂದು ಅವರು ಬಿಟ್ಟು ಹೋದ ಪರಂಪರೆಯ ಮಾರ್ಗವನ್ನು ಅನುಸರಿಸಲು ಮತ್ತು ನಮ್ಮ ಜೀವನವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಮುನ್ನಡೆಸಲು ನಾವು ಪ್ರತಿಜ್ಞೆ ಮಾಡೋಣ.

 ಧನ್ಯವಾದಗಳು. 

ಗಾಂಧಿ ಜಯಂತಿ ಭಾಷಣ-2

ಗೌರವಾನ್ವಿತ ಪ್ರಾಂಶುಪಾಲರೇ, ಶಿಕ್ಷಕರೇ ಮತ್ತು ನನ್ನ ಆತ್ಮೀಯ ಸ್ನೇಹಿತರಿಗೆ ಶುಭೋದಯ.ನಮಗೆಲ್ಲರಿಗೂ ತಿಳಿದಿರುವಂತೆ ನಾವು ಗಾಂಧಿ ಜಯಂತಿಯ ಶುಭ ಸಂದರ್ಭವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ, ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರ ಮುಂದೆ ಗಾಂಧೀ ಜಯಂತಿ ಆಚರಣೆ ಕುರಿತು ಮಾತನಾಡಲು ಬಯಸುತ್ತೇನೆ. ನನ್ನ ಆತ್ಮೀಯ ಸ್ನೇಹಿತರೆ ಅಕ್ಟೋಬರ್ 2, ಮಹಾತ್ಮ ಗಾಂಧಿಯವರ ಜನ್ಮದಿನ.

ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಮತ್ತು ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕಾಗಿ ಸ್ವಾತಂತ್ರ ಹೋರಾಟದ ಹಾದಿಯಲ್ಲಿ ಅವರ ಧೈರ್ಯಶಾಲಿ ಕಾರ್ಯಗಳನ್ನು ಸ್ಮರಿಸಲು ನಾವು ಪ್ರತಿ ವರ್ಷ ಈ ದಿನವನ್ನು ಪೂರ್ಣ ಉತ್ಸಾಹದಿಂದ ಆಚರಿಸುತ್ತೇವೆ. ನಾವು ಗಾಂಧಿ ಜಯಂತಿಯನ್ನು ಭಾರತದ ಅತ್ಯಂತ ದೊಡ್ಡ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತೇವೆ. ಮಹಾತ್ಮ ಗಾಂಧಿಯವರ ಪೂರ್ಣ ಹೆಸರು ಮೋಹನ್ ದಾಸ್  ಕರಮಚಂದ್ ಗಾಂಧಿ ಮತ್ತು ಅವರು ಬಾಪು ಮತ್ತು ರಾಷ್ಟ್ರಪಿತ ಎಂದು ಪ್ರಸಿದ್ಧರಾಗಿದ್ದಾರೆ.

ಅವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯ ಮಾರ್ಗದಲ್ಲಿ ನಡೆದರು ಆದ್ದರಿಂದ ಅಕ್ಟೋಬರ್ 2ನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಅಂತರರಾಷ್ಟ್ರೀಯವಾಗಿ ಆಚರಿಸಲಾಗುತ್ತದೆ. 2007ರ ಜೂನ್ 15 ರಂದು ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಯಿಂದ ಅಕ್ಟೋಬರ್  2ನ್ನು ಅಹಿಂಸಾ ಅಂತರಾಷ್ಟ್ರೀಯ ದಿನವೆಂದು ಘೋಷಿಸಲಾಯಿತು. ನಾವು ಯಾವಾಗಲೂ ಬಾಪುವನ್ನು ಶಾಂತಿ ಮತ್ತು  ಸತ್ಯದ ಸಂಕೇತವಾಗಿ ಸ್ಮರಿಸುತ್ತೇವೆ. ಅಕ್ಟೋಬರ್ 2, 1869ರಲ್ಲಿ ಗಾಂಧೀಜಿಯವರು ಗುಜರಾತ್ ನ ಪೋರ ಬಂದರ್ ಎಂಬ ಚಿಕ್ಕ ಪಟ್ಟಣದಲ್ಲಿ ಜನಿಸಿದರು. ಅದಾಗಿಯೂ ಅವರ ಜೀವನದುದ್ದಕ್ಕೂ ಮಹತ್ತರವಾದ ಕಾರ್ಯಗಳನ್ನು ಮಾಡಿದರು. ಅವರು ವಕೀಲರಾಗಿದ್ದರು ಮತ್ತು ಅವರು ಲಂಡನ್ ನಿಂದ ಕಾನೂನು ಪದವಿಯನ್ನು ಪಡೆದರು ಮತ್ತು ದಕ್ಷಿಣ ಆಫ್ರಿಕಾದಲ್ಲಿ, ಕಾನೂನು ಅಭ್ಯಾಸ ಮಾಡಿದರು. “ಸತ್ಯದೊಂದಿಗೆ ನನ್ನ ಪ್ರಯೋಗಗಳು” ಎಂಬ ತನ್ನ ಆತ್ಮಚರಿತ್ರೆಯಲ್ಲಿ ಅವರು ಹೋರಾಟದ ಸಂಪೂರ್ಣ ಜೀವನ ಚರಿತ್ರೆಯನ್ನು ವಿವರಿಸಿದ್ದಾರೆ. ಅವರು ಸ್ವಾತಂತ್ರ್ಯ ಬರುವವರೆಗೂ ತಮ್ಮ ಜೀವನದುದ್ದಕ್ಕೂ ಭಾರತದ ಸ್ವಾತಂತ್ರ್ಯಕ್ಕಾಗಿ  ಬ್ರಿಟಿಷ್ ಆಡಳಿತದ  ವಿರುದ್ಧ  ಸಾಕಷ್ಟು ತಾಳ್ಮೆ ಮತ್ತು  ಧೈರ್ಯದಿಂದ ನಿರಂತರವಾಗಿ ಹೋರಾಡಿದರು.

ಗಾಂಧೀಜಿ  ಸರಳ ಜೀವನ ಮತ್ತು ಉನ್ನತ  ಚಿಂತನೆಯ ವ್ಯಕ್ತಿಯಾಗಿದ್ದು  ಅದು ನಮಗೆ ಮಾದರಿಯಾಗಿದೆ. ಅವರು ಧೂಮಪಾನ, ಮದ್ಯಪಾನ, ಅಸ್ಪೃಶ್ಯತೆ ಮತ್ತು ಮಾಂಸ ಆಹಾರಕ್ಕೆ ತುಂಬಾ ವಿರುದ್ಧವಾಗಿದ್ದರು. ಈ ದಿನ ಭಾರತ  ಸರ್ಕಾರವು  ಇಡೀ ದಿನ  ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದ ಅವರು, ಸತ್ಯ ಮತ್ತು ಅಹಿಂಸೆಯ ಹರಿಕಾರರಾಗಿದ್ದರು. ಗಾಂಧಿ ಜಯಂತಿಯನ್ನು ನವ ದೆಹಲಿಯ ರಾಜ್ ಘಾಟ್ ನಲ್ಲಿ ಅವರ ಅಂತ್ಯಕ್ರಿಯೆಯ ಸ್ಥಳದಲ್ಲಿ ಪ್ರಾರ್ಥನೆಗಳು, ಹೂವಿನ ಅರ್ಪಣೆಗಳು ಅವರ ನೆಚ್ಚಿನ ಹಾಡು ರಘುಪತಿ ರಾಘವ್ ರಾಜ ರಾಮ್ ಪತಿತ್ ಪಾವನ ಸೀತಾ ರಾಮ್ ಮುಂತಾದವುಗಳನ್ನು ಸಮರ್ಪಿಸುವ ಮೂಲಕ ಸಾಕಷ್ಟು ಸಿದ್ಧತೆಗಳೊಂದಿಗೆ ಆಚರಿಸಲಾಗುತ್ತದೆ. ಗಾಂಧೀಜಿಯವರಿಗೆ ನಮನ ಸಲ್ಲಿಸೋಣ ಮತ್ತು ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯೋಣ.  ಇಷ್ಟು ಮಾತನಾಡಲು  ಅವಕಾಶ  ಮಾಡಿಕೊಟ್ಟ  ನಿಮಗೆಲ್ಲರಿಗೂ ಧನ್ಯವಾದಗಳು.

ಜೈ ಹಿಂದ್!

ಗಾಂಧಿ ಜಯಂತಿ ಭಾಷಣ-3

ಗೌರವಾನ್ವಿತ ಶಿಕ್ಷಕರೆ ಮತ್ತು ನನ್ನ ಸ್ನೇಹಿತರೆ ಇಂದು ಗಾಂಧಿ ಜಯಂತಿಯಂದು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಮಹಾತ್ಮ ಗಾಂಧಿಯವರ ಜನ್ಮ ದಿನದಂದು ಅವರ ಬಗ್ಗೆ ನನ್ನ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಗುಜರಾತ್ ನ ಪೋರಬಂದರ್ ನಲ್ಲಿ ಅಕ್ಟೋಬರ್ 2, 1869ರಂದು ಜನಿಸಿದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವ ಮೂಲಕ ನಮ್ಮ ದೇಶ ಅವರಿಗೆ ಗೌರವ ಸಲ್ಲಿಸುತ್ತದೆ. ಗಾಂಧೀಜಿಯವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ. ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಮೂಲಕ ಬ್ರಿಟೀಷರನ್ನು ಅನೇಕ ಬಾರಿ ಮಂಡಿಯೂರುವಂತೆ ಮಾಡಿದರು. ಗಾಂಧೀಜಿಯವರ ಹಿರಿಮೆಯನ್ನು ಇಂದು ಭಾರತದ ಹೊರಗೆ ಪ್ರಪಂಚದ ಅನೇಕ ದೇಶಗಳಲ್ಲಿ ಅವರ ಪ್ರತಿಮೆ ಮತ್ತು ಸ್ಥಳಗಳ ಹೆಸರುಗಳಿವೆ ಎಂಬ ಅಂಶದಿಂದ ಅಳೆಯಬಹುದು. ಅವರ ಆಲೋಚನೆಗಳ ಗೌರವಾರ್ಥವಾಗಿ, ಅಹಿಂಸಾ ಅಂತರಾಷ್ಟ್ರೀಯ ದಿನವನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ. 

ಇಂದಿನ ನಮ್ಮ ಆಹಾರ ಪದ್ಧತಿ, ಜೀವನ ಶೈಲಿ, ಆಲೋಚನೆಗಳು ಮತ್ತು ಭಾಷಾ ಶೈಲಿಯಲ್ಲಿ ಬಾಪು ಅವರ ಜೀವನದ ಚಾಪು ಸ್ಪಷ್ಟವಾಗಿ ಕಂಡುಬರುತ್ತದೆ. ಸಹಿಷ್ಣತೆ, ತ್ಯಾಗ, ಸಂಯಮ ಮತ್ತು ಸರಳತೆಗೆ ಗಾಂಧಿ ಅದ್ಬುತ ಉದಾಹರಣೆಯಾಗಿದ್ದರು. ಅವರು ಅದ್ಭುತ ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ, ಜನರು ಅವರ ನೇತತ್ವದಲ್ಲಿ ಜೈಲಿಗೆ ಹೋದರು ಮತ್ತು ಲಾಠಿಚಾರ್ಜ್ ಮತ್ತು ಗುಂಡಗಳನ್ನು ಸಹಿಸಿಕೊಂಡರು. ಅವರ ಆಂದೋಲನಗಳಾದ ಅಸಹಕಾರ ಚಳುವಳಿ, ವಿದೇಶಿ ಜವಳಿ ಬಹಿಷ್ಕಾರ, ಚಂಪಾರನ್ ಸತ್ಯಾಗ್ರಹ, ದಂಡಿ ಸತ್ಯಾಗ್ರಹ, ದಲಿತ ಚಳುವಳಿ, ರೌಲತ್ ಕಾಯ್ದೆ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಮುಂತಾದ ಚಳುವಳಿಗಳು ಬ್ರಿಟಿಷರಲ್ಲಿ ಭಯ ಉಂಟು ಮಾಡಿ ಸ್ವಾತಂತ್ರದ ಹಾದಿಯನ್ನು ಸುಲಭಗೊಳಿಸಿದವು.

ಗಾಂಧೀಜಿಯವರು ಭಾರತೀಯರಿಗೆ ಸ್ಥಳೀಯ ವಸ್ತುಗಳನ್ನು ಪ್ರೀತಿಸಲು ಕಲಿಸಿದರು. ವಿದೇಶಿ ಬಟ್ಟೆಗಳ ಹೋಳಿ, ಆಚರಣೆ ಪರಿಣಾಮವಾಗಿ ಸ್ಥಳೀಯ ಕೈಗಾರಿಕೆಗಳಿಗೆ  ಉತ್ತೇಜನ ಸಿಕ್ಕಿತು. ಸ್ವಾತಂತ್ರ್ಯದ ಹೊರತಾಗಿ ಗಾಂಧೀಜಿಗೆ ಗ್ರಾಮ ಸ್ವರಾಜ್ ಎಂಬ ಇನ್ನೊಂದು ಕನಸಿತ್ತು. ಹಳ್ಳಿಗಳು ಸ್ವಾವಲಂಬಿಯಾಗಬೇಕೆಂದು ಅವರು ಬಯಸಿದರು. ಗ್ರಾಮದಲ್ಲಿ ಕೈಗಾರಿಕೆಗಳು, ಬಲಗೊಳ್ಳಬೇಕು ಎಂಬ ಅವರ ಕನಸು, 1993 ರಲ್ಲಿ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗ ನನಸಾಯಿತು. 

ಗಾಂಧೀಜಿಯವರು  ಭಾರತೀಯ ಸಮಾಜದಲ್ಲಿ ಜಾಲ್ತಿಯಲ್ಲಿರುವ  ಅಸ್ಪೃಶ್ಯತೆಯಂತಹ ಅನಿಷ್ಟಗಳ ವಿರುದ್ಧ ನಿರಂತರವಾಗಿ  ಧ್ವನಿ ಎತ್ತಿದರು. ಹರಿಜನರ ಅಭ್ಯುದಯಕ್ಕಾಗಿ ಅವರು ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.  ಅವರೇ ಹರಿಜನ ಕಾಲೋನಿಯಲ್ಲಿ ವಾಸ  ಮಾಡಿದರು, ಸಮಾಜದಲ್ಲಿ ಹರಿಜನರಿಗೆ ಸಮಾನ ಸ್ಥಾನ ಮಾನ ಕಲ್ಪಿಸಲು ತಮ್ಮ ಜೀವನದುದ್ದಕ್ಕೂ ಹೋರಾಡಿದರು.

ಸ್ನೇಹಿತರೆ ಇಂದು ನಾವು ಗಾಂಧೀಜಿಯವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು.

ಧನ್ಯವಾದಗಳು

ಜೈ ಹಿಂದ್ !

ಗಾಂಧಿ ಜಯಂತಿ ಭಾಷಣ-4

ಗೌರವಾನ್ವಿತ ಪ್ರಾಂಶುಪಾಲರಿಗೆ, ಗಣ್ಯರಿಗೆ, ಶಿಕ್ಷಕರಿಗೆ ಮತ್ತು ನನ್ನ ಆತ್ಮೀಯ ಸಹಪಾಠಿಗಳಿಗೆ ಶುಭೋದಯ.ನನ್ನ ಹೆಸರು….. ನಾನು……. ತರಗತಿಯಲ್ಲಿ ಓದುತ್ತಿದ್ದೇನೆ.  ನಾನು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ  ಒಂದು ಚಿಕ್ಕ ಭಾಷಣವನ್ನು ಮಾಡಲು ಬಯಸುತ್ತೇನೆ.  ಈ ಮಹತ್ತರವಾದ ಸಂದರ್ಭ ದಲ್ಲಿ ನನಗೆ ಭಾಷಣ ಮಾಡಲು, ಅವಕಾಶ ನೀಡಿದ ನನ್ನ ತರಗತಿ ಶಿಕ್ಷರಿಗೆ  ಮೊದಲನೆಯದಾಗಿ ಧನ್ಯವಾದ ಹೇಳಲು ಬಯಸುತ್ತೇನೆ.  ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ಪ್ರತಿವರ್ಷ ಅಕ್ಟೋಬರ್ 2ರಂದು ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ಆಚರಿಸಲು ಇಲ್ಲಿ ಸೇರುತ್ತೇವೆ. ಗಾಂಧಿ ಜಯಂತಿಯನ್ನು ನಮ್ಮ ದೇಶದಲ್ಲಿ ಮಾತ್ರ ಆಚರಿಸಲಾಗುವುದಿಲ್ಲ ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.  ಅಕ್ಟೋಬರ್ 2ರಂದು ಭಾರತದಲ್ಲಿ ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ ಆದರೆ ಅವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯ ಮಾರ್ಗವನ್ನು  ಅನುಸರಿಸಿದ್ದರಿಂದ ಪ್ರಪಂಚದಾದ್ಯಂತ ಈ ದಿನವನ್ನು ಅಂತರರಾಷ್ಟ್ರೀಯ  ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ.

ಗಾಂಧೀಜಿಯವರ ಪೂರ್ಣ ಹೆಸರು  ಮೋಹನ್ ದಾಸ್  ಕರಮಚಂದ್ ಗಾಂಧಿ  ಆದರೆ ಅವರು ಬಾಪು, ಮಹಾತ್ಮ ಗಾಂಧಿ ಮತ್ತು  ರಾಷ್ಟ್ರಪಿತ ಎಂದು ಜನಪ್ರಿಯರಾಗಿದ್ದರು.  ಅವರು ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೂರಬಂದರ್ ನಲ್ಲಿ ಜನಿಸಿದರು.ಈ ದಿನ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ನವ ದೆಹಲಿಯ ರಾಜ್ ಘಾಟ್ ನಲ್ಲಿ ಪ್ರಾರ್ಥನೆ, ಪುಷ್ಪಾರ್ಚನೆ, ಭಜನೆಗಳು, ಭಕ್ತಿಗೀತೆಗಳು, ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಅವರ ಸಮಾಧಿಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಗೌರವ ಸಲ್ಲಿಸುತ್ತಾರೆ. ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಜನರನ್ನು ಯಾವಾಗಲೂ ಒಂದೇ ರೀತಿಯಲ್ಲಿ ಗೌರವಿಸುವ ವ್ಯಕ್ತಿಯನ್ನು  ಸ್ಮರಿಸುವ  ಸಲುವಾಗಿ ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಧಾರ್ಮಿಕ ಪವಿತ್ರ ಪುಸ್ತಕಗಳ, ಪದ್ಯಗಳು ಮತ್ತು ಪ್ರಾರ್ಥನೆಗಳನ್ನು ವಿಶೇಷವಾಗಿ ರಘುಪತಿ, ರಾಘವ ರಾಜ ರಾಮ್ ನಂತಹ ಅವರ ನೆಚ್ಚಿನ ಗೀತೆಗಳನ್ನು ಹಾಡಲಾಗುತ್ತದೆ. ದೇಶದ ವಿವಿಧ ರಾಜ್ಯಗಳ ರಾಜಧಾನಿಗಳಲ್ಲೂ ಪ್ರಾರ್ಥನಾ ಸಭೆಗಳು ನಡೆಯುತ್ತವೆ. ಈ ದಿನವನ್ನು ಭಾರತ ಸರ್ಕಾರವು ರಾಷ್ಟ್ರೀಯ ರಜಾದಿನವೆಂದು ಘೋಷಿಸಿರುವುದರಿಂದ ದೇಶಾದ್ಯಂತ  ಎಲ್ಲಾ ಶಾಲಾ  ಕಾಲೇಜುಗಳು ಕಚೇರಿಗಳು ಇತ್ಯಾದಿಗಳನ್ನು ಮುಚ್ಚಲಾಗುತ್ತದೆ.

ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಸಾಕಷ್ಟು ಹೋರಾಟ ನಡೆಸಿ, ಮಹತ್ವದ ಪಾತ್ರವಹಿಸಿದ ಮಹಾನ್ ವ್ಯಕ್ತಿ. ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯಲು, ಅಹಿಂಸೆಯ  ಮಾರ್ಗವನ್ನು ಅನುಸರಿಸಿದರು ಮತ್ತು ಅಹಿಂಸೆಯ ಮಾರ್ಗದಿಂದ ಶಾಂತಿಯುತವಾಗಿ ಸ್ವಾತಂತ್ರವನ್ನು ಸಾಧಿಸಬಹುದು ಎಂದು ಜಗತ್ತಿಗೆ ಸಾಬೀತುಪಡಿಸಿದರು. ಅವರು ಶಾಂತಿ ಮತ್ತು  ಸತ್ಯದ ಸಂಕೇತವಾಗಿ ನಮ್ಮ ನಡುವೆ  ಇಂದಿಗೂ ನೆನಪಿನಲ್ಲಿದ್ದಾರೆ.

 ಜೈಹಿಂದ್!

 ಧನ್ಯವಾದ! 

ಗಾಂಧಿ ಜಯಂತಿ ಭಾಷಣ-5

ಗೌರವಾನ್ವಿತ ಪ್ರಾಂಶುಪಾಲರೇ, ಶಿಕ್ಷಕರೆ ಮತ್ತು ನನ್ನ ಆತ್ಮೀಯ ಸ್ನೇಹಿತರಿಗೆ  ಶುಭೋದಯ.ನನ್ನ ಆತ್ಮೀಯ ಸ್ನೇಹಿತರೆ, ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರ ಶುಭ ಸಂದರ್ಭವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ.ಈ  ಆಚರಣೆ ನಮಗೆ  ತುಂಬಾ ಅರ್ಥಯುತವಾಗಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು.  ಮಹಾತ್ಮ ಗಾಂಧಿಯವರ ಪೂರ್ಣ ಹೆಸರು  ಮೋಹನ್ ದಾಸ್ ಕರಮಚಂದ್ ಗಾಂಧಿ ಆದರೆ ಪ್ರಪಂಚದಾದ್ಯಂತ ಗಾಂಧೀಜಿ, ರಾಷ್ಟ್ರದ ಪಿತಾಮಹ ಮತ್ತು ಬಾಪು ಎಂದು ಜನಪ್ರಿಯವಾಗಿದ್ದರು. ಬಾಪು ಅವರ ಜನ್ಮ ದಿನವನ್ನು  ದೇಶಾದ್ಯಂತ ಗಾಂಧಿ ಜಯಂತಿ ಎಂದು  ಆಚರಿಸಲಾಗುತ್ತದೆ ಆದರೆ ಪ್ರಪಂಚದಾದ್ಯಂತ ಈ ದಿನವನ್ನು  ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ.

ಪಾಪು ಹುಟ್ಟಿದ್ದು, ದೇಶದ ಒಂದು ಚಿಕ್ಕ ಪಟ್ಟಣದಲ್ಲಿ ಆದರೆ, ಅವರ ಕಾರ್ಯಗಳು ತುಂಬಾ ದೊಡ್ಡದಾಗಿದ್ದು, ಪ್ರಪಂಚದಾದ್ಯಂತ ಅವರ ಕೀರ್ತಿ ಹರಡುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಅಹಿಂಸೆಯ ಮೂಲಕ ಅತ್ಯಂತ ಶಾಂತಿಯುತವಾಗಿ ಬ್ರಿಟೀಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆಯಬೇಕೆಂದು ಯಾವಾಗಲು ನಂಬಿದ ವ್ಯಕ್ತಿ, ಅವರು ಅಹಿಂಸೆಯ ಪ್ರವರ್ತಕ ರಾಗಿದ್ದರು ಅವರ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರವನ್ನು ಸಾಧಿಸಲು ಅಹಿಂಸೆಯು ಏಕೈಕ ಪರಿಣಾಮಕಾರಿ ಮಾರ್ಗವಾಗಿದೆ. ಬಾಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಅವರು ತಮ್ಮ ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ  ಮುಡಿಪಾಗಿಟ್ಟರು.

ಭಾರತೀಯರ ನಿಜವಾದ ನೋವನ್ನು ಅರಿತು ಕೊಂಡ ನಂತರ ಅವರು ಗೋಪಾಲಕೃಷ್ಣ ಗೋಖಲೆ, ಅವರೊಂದಿಗೆ ವಿವಿಧ ಸ್ವಾತಂತ್ರ್ಯ ಚಳುವಳಿಗಳಲ್ಲಿ, ಭಾಗವಹಿಸಲು ಪ್ರಾರಂಭಿಸಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಅಭಿಯಾನಗಳೆಂದರೆ ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿ. ಅವರು ಹಲವು ಬಾರಿ ಜೈಲಿಗೆ ಹೋದರು, ಶಾಂತಿಯುತವಾಗಿ ಹೋರಾಡುವ ತಾಳ್ಮೆ ಕಳೆದುಕೊಳ್ಳಲಿಲ್ಲ.  ಬಾಪು ಅವರ  ಇಡೀ ಜೀವನವು ದೇಶಭಕ್ತಿ, ತ್ಯಾಗ, ಅಹಿಂಸೆ, ಸರಳತೆ ಮತ್ತು ದೃಢತೆಯ ಆದರ್ಶ  ಉದಾಹರಣೆಯಾಗಿ  ನಮ್ಮ ಮತ್ತು ಭವಿಷ್ಯದ  ಪೀಳಿಗೆಗೆ  ಮಾದರಿಯಾಗಿದೆ. ಗಾಂಧಿ ಜಯಂತಿಯನ್ನು ಭಾರತೀಯ ಜನರು ಪ್ರತಿವರ್ಷ ಸಾಕಷ್ಟು ಸಿದ್ಧತೆಗಳೊಂದಿಗೆ ಆಚರಿಸುತ್ತಾರೆ. ಈ  ಸಂದರ್ಭವನ್ನು ಆಚರಿಸುವ ಉದ್ದೇಶವು ಬಾಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಬಾಪು ಅವರು ಮಾಡಿದ ಎಲ್ಲಾ ಹೋರಾಟಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದು. ನಮ್ಮ ಮಾತೃಭೂಮಿಯ ಗೌರವವನ್ನು ಕಾಪಾಡಿಕೊಳ್ಳಲು ಪ್ರತಿ ಬಾರಿಯೂ ತೆರೆದ ಕಣ್ಣಿನಿಂದ ಸಕ್ರಿಯವಾಗಿರಲು ಇದು ನಮಗೆ ಕಲಿಸುತ್ತದೆ, ಮಹಾತ್ಮ ಗಾಂಧಿಯವರ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು, ನಾನು ಬಯಸುತ್ತೇನೆ.

“ನನ್ನ ಜೀವನವೇ ನನ್ನ ಸಂದೇಶ” ಮತ್ತು “ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಬೇಕು”.

ಜೈ ಹಿಂದ್, ಜೈ ಭಾರತ್!

ಧನ್ಯವಾದ! 

ಗಾಂಧಿ ಜಯಂತಿ ಭಾಷಣ-6

ಗಾಂಧಿ ಜಯಂತಿಯ ಈ ಶುಭ ಸಂದರ್ಭದಲ್ಲಿ ಇಲ್ಲಿ ನೆರೆದಿರುವ ಎಲ್ಲರಿಗೂ  ಶುಭಾಶಯಗಳು.ಈ ಮಹತ್ವದ ದಿನವನ್ನು ನಮ್ಮೊಂದಿಗೆ ಆಚರಿಸಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಪ್ರತಿವರ್ಷ ಅಕ್ಟೋಬರ್ 2ರಂದು ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜನ್ಮದಿನದ ನೆನಪಿಗಾಗಿ ಮತ್ತು ಗೌರವಾರ್ಥವಾಗಿ ಭಾರತವು ರಾಷ್ಟ್ರೀಯ ಹಬ್ಬವನ್ನಾಗಿ ಗಾಂಧಿ ಜಯಂತಿಯನ್ನು ಆಚರಿಸುತ್ತದೆ. ಮಹಾತ್ಮ ಗಾಂಧಿ ಎಂದು ಕರೆಯಲ್ಪಡುವ ಮೋಹನ್ ದಾಸ್ ಕರಮಚಂದ್ ಗಾಂಧಿ ಅವರಿಗೆ ನೇತಾಜಿ  ಸುಭಾಷ್ ಚಂದ್ರ ಬೋಸ್ ಅವರು ನಮ್ಮ ಸ್ವಾತಂತ್ರ್ಯಕ್ಕಾಗಿ ನಿರಂತರ  ಹೋರಾಟಗಳಿಗಾಗಿ ರಾಷ್ಟ್ರಪಿತ ಎಂಬ ಬಿರುದನ್ನು ನೀಡಿದರು.  ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್, ಅವರಿಗೆ  ಮಹಾತ್ಮ ಎಂಬ ಬಿರುದನ್ನು ನೀಡಿದರು. ಇದರ ಅರ್ಥ ಶ್ರೇಷ್ಠ ಆತ್ಮ ಹೊಂದಿರುವವರು.

ಈ ವರ್ಷ ಅವರ 154ನೇ ಜನ್ಮದಿನವಾಗಿದ್ದು, ಅವರು ತಮ್ಮ ಜೀವನವನ್ನು ನಡೆಸಿದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತತ್ವಗಳನ್ನು ಪುನರ್ ವಿಮರ್ಶಿಸಲು ನಾವು ಇಲ್ಲಿ ಸೇರಿದ್ದೇವೆ.

ಗಾಂಧೀಜಿಯವರ  ಎರಡು ಮುಖ್ಯ ತತ್ವಗಳೆಂದರೆ ಶಾಂತಿ ಮತ್ತು ಅಹಿಂಸೆ ಅವರು ಯಾವಾಗಲೂ ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಅನುಯಾಯಿಯಾಗಿದ್ದರು. ಅವರು, ಜಗತ್ತಿಗೆ ಹೋರಾಟಕ್ಕಾಗಿ ಅಹಿಂಸೆ ಎಂಬ ಪ್ರಬಲ ಅಸ್ತ್ರವನ್ನು ನೀಡಿದ ಕಾರಣ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅವರ ತತ್ವಗಳನ್ನು ಗೌರವಿಸಲು ಈ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿತು. 

ಮಹಾತ್ಮ ಗಾಂಧಿಯವರು ಗುಜರಾತ್ ನ ಪೋರಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಬ್ರಿಟಿಷ್ ಭಾರತದಲ್ಲಿ ವ್ಯಾಪಾರಿ  ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ, ಪೂರ್ಣಗೊಳಿಸಿದರು ಮತ್ತು ನಂತರ ಕಾನೂನು ಪದವಿ ಪಡೆಯಲು ಇಂಗ್ಲೆಂಡ್ ಗೆ ತೆರಳಿದರು. ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಭಾರತದಲ್ಲಿ ಕಾನೂನು ಅಭ್ಯಾಸ ಮಾಡಲು ಪ್ರಯತ್ನಿಸಿದರು. ತಮ್ಮ 24ನೇ ವಯಸ್ಸಿನಲ್ಲಿ ಅವರು ತಮ್ಮ ಪತ್ನಿ ಕಸ್ತೂರಿಬಾ ಗಾಂಧಿಯವರೊಂದಿಗೆ, ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡಲು ಭಾರತವನ್ನು ತೊರೆದರು. 

ದಕ್ಷಿಣ ಆಫ್ರಿಕಾದಲ್ಲಿ ಅವರು, ತಮ್ಮ ಜನಾಂಗ ಮತ್ತು ಬಣ್ಣದಿಂದಾಗಿ ಮೊದಲ ಬಾರಿಗೆ ಅಸಮಾನತೆಯನ್ನು ಎದುರಿಸಿದರು. ಅವರು ತನ್ನ ಬಿಳಿ ಸಹ ಪ್ರಯಾಣಿಕರನ್ನು ಹೋಲಿಕೆಯಾಗದ ಕಾರಣ ಅವರನ್ನು , ರೈಲಿನಿಂದ ಹೊರ ಹಾಕಲಾಯಿತು. ಅವರು ಕೆಲವು ವರ್ಷಗಳ ಕಾಲ ಭಾರತೀಯರ  ಜೀವನವನ್ನು ಸುಧಾರಿಸಲು, ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಿದರು.

ಅವರು ಕಾನೂನು ಅಭ್ಯಾಸ ಮಾಡಲು ಭಾರತಕ್ಕೆ ಹಿಂದಿರುಗಿದಾಗ ಅವರ ಸುತ್ತಲಿರುವ ಅನ್ಯಾಯಗಳನ್ನು ನೋಡಿ ಅವರು  ದಿಗ್ಭ್ರಮೆಗೊಂಡರು,  ಅದು ಅವರಲ್ಲಿ ನ್ಯಾಯವನ್ನು ಪ್ರತಿಪಾದಿಸುವ ಆಳವಾದ ಪ್ರಜ್ಞೆಯನ್ನು ಪ್ರಚೋದಿಸಿತು. ಶೀಘ್ರದಲ್ಲೇ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರಿದರು ಮತ್ತು 1917ರಲ್ಲಿ ಚಂಪಾರನ್ ಸತ್ಯಾಗ್ರಹ ದೊಂದಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಪ್ರಾರಂಭಿಸಿದರು.

ತನ್ನ ಅಹಿಂಸೆಯ  ಅಸ್ತ್ರದಿಂದ ಅವರು ಜಗತ್ತಿಗೆ  ಬದಲಾವಣೆಯತ್ತ ಹೊಸ ಬೆಳಕನ್ನು ತೋರಿಸಿದರು.  ಅವರು ಯಾವಾಗಲು  ನ್ಯಾಯದ ಪರವಾಗಿ ಹೋರಾಡಿದರು ಮತ್ತು ಅನೇಕ  ಅಹಿಂಸಾತ್ಮಕ  ನಾಗರಿಕ ಹಕ್ಕುಗಳ ಚಳುವಳಿಗಳಲ್ಲಿ  ಭಾಗವಹಿಸಿದ್ದರು  ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿಭಟಿಸಲು ದಂಡಿ  ಮೆರವಣಿಗೆಯಂತಹ ಅನೇಕ ಚಳುವಳಿಗಳನ್ನು ನಡೆಸಿದರು.

1930ರಲ್ಲಿ ಅವರು ಅಕ್ರಮವಾಗಿ ವಿಧಿಸಲಾದ ಉಪ್ಪಿನ ತೆರಿಗೆಯನ್ನು ಪ್ರತಿಭಟಿಸಲು ದಂಡಿ ಮೆರವಣಿಗೆಯನ್ನು ನಡೆಸಿದರು, ಇದನ್ನು ಸಾಲ್ಟ್ ಮಾರ್ಚ್ ಎಂದು ಕರೆಯುತ್ತಾರೆ, ಏಕೆಂದರೆ ನಮ್ಮ ಕರಾವಳಿಯ ಸ್ಥಳದಿಂದಾಗಿ ಈ ಮೂಲ ಸೌಕರ್ಯವು ಈಗಾಗಲೇ ಭಾರತೀಯರಿಗೆ ಉಚಿತವಾಗಿ ಲಭ್ಯವಿತ್ತು. ಸಾವಿರಾರು ಜನ ಗಾಂಧಿಯನ್ನು ಹಿಂಬಾಲಿಸಿದರು. ಅವರು ಭಾರತವನ್ನು ಆಳುವ ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆಯಲು ಪ್ರಸಿದ್ಧವಾದ  ಕ್ವಿಟ್ ಇಂಡಿಯಾ ಚಳುವಳಿ, ನಾಗರೀಕ ಅಸಹಕಾರ ಚಳುವಳಿ  ಮತ್ತು ಅಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಈ ಪ್ರತಿಭಟನೆಗಳಿಂದಾಗಿ ಮಹಾತ್ಮ ಗಾಂಧಿಯವರು ತಮ್ಮ ಅನುಯಾಯಿಗಳು ಮತ್ತು ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಜೈಲುವಾಸವನ್ನು ಅನುಭವಿಸಿದರು.

ಅವರು ಶಾಂತಿಯುತ ನಾಗರಿಕ ಅಸಹಕಾರ ಎಂದು ಕರೆಯಲ್ಪಡುವ ಪ್ರತಿಭಟನೆಗೆ ಹೊಸ ಮಾರ್ಗವನ್ನು ಕಂಡುಹಿಡಿದರು. ಅವರ  ಅಹಿಂಸಾತ್ಮಕ  ಪ್ರತಿಭಟನೆಗಳು ಪ್ರಪಂಚದ ಜನರ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರಿತು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ  ಹೋರಾಡಿದರು ಮತ್ತು 200 ವರ್ಷಗಳ ಕಾಲ ಬ್ರಿಟೀಷರ ಅಧೀನದಲ್ಲಿದ್ದ ನಮಗೆ  ಸ್ವಾತಂತ್ರ್ಯವನ್ನು ಪಡೆಯಲು ಸಹಾಯ ಮಾಡಿದರು.  ಗಾಂಧೀಜಿಯವರು  ಅಂದಿನ  ಭಾರತೀಯ ಸಮಾಜದಲ್ಲಿ ಅತಿರೇಕವಾಗಿದ್ದ ಸಾಮಾಜಿಕ ಅನಿಷ್ಠ ಗಳನ್ನು ತೊಡೆದುಹಾಕಲು ಶ್ರಮಿಸಿದರು. ಅದರಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹ, ಅಸ್ಪೃಶ್ಯತೆ ಮತ್ತು  ಜಾತೀಯತೆ ಅಂತಹ ಅನಿಷ್ಟಗಳು ಸೇರಿದ್ದವು.

ಗಾಂಧೀಜಿಯವರು ಸರಳತೆಯ ಜೀವನ ನಡೆಸಿದರು. ಅವರು ತನ್ನ  ಅನುಯಾಯಿಗಳಿಗೆ ವಿಷಯಗಳನ್ನು  ಸರಳವಾಗಿಡಲು ಮತ್ತು  ಲೌಕಿಕ ಸುಖಗಳಿಗೆ ದಾಸರಾಗದಂತೆ  ಉಪದೇಶಿಸಲು ಬಯಸಿದರು. ಅವರು ಜಗತ್ಪ್ರಸಿದ್ಧ ನಾಯಕರಾಗಿದ್ದರು, ಅವರು ತಮ್ಮ ಚರಕದಲ್ಲಿ ತಾವೇ ನೂಲುವ ಮೂಲಕ ಸರಳ ಖಾದಿ ಬಟ್ಟೆಗಳನ್ನು ತಯಾರಿಸಿ ಧರಿಸುತ್ತಿದ್ದರು. ಸರಳ ಜೀವನದ ಮೂಲಕ ಮಹಾನ್ ಸಾಧನೆಗಳನ್ನು ಮಾಡಿದ ಭಾರತದ ಮಹಾನ್  ತಪಸ್ವಿಗಳು ಮತ್ತು ಗುರುಗಳಿಂದ ಅವರು ಸ್ಪೂರ್ತಿ ಪಡೆದರು.  ಗಾಂಧೀಜಿಯವರು  ಎಲ್ಲಾ ಭಾರತೀಯ ಧರ್ಮಗಳ ಬಗ್ಗೆ  ಭಕ್ತಿ ಮತ್ತು ಗೌರವವನ್ನು ಹೊಂದಿದ್ದರು. ಅವರು ಎಲ್ಲರ ಸಮಾನತೆಯನ್ನು ನಂಬಿದ್ದರು ಮತ್ತು ಪ್ರತಿಯೊಬ್ಬರು ತಮ್ಮದೇ ಆದ ದೇವರುಗಳನ್ನು ಪೂಜಿಸುವ ಹಕ್ಕನ್ನು ಹೊಂದಿದ್ದಾರೆ.

ಸಮಾನತೆ ಶಾಂತಿ ಸೌಹಾರ್ದತೆ ಮತ್ತು ಭ್ರಾತೃತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಯಾವಾಗಲೂ  ಅಸ್ಪೃಶ್ಯತೆಯನ್ನು ವಿರೋಧಿಸಿದರು ಮತ್ತು  ಹಿಂದೂ, ಮುಸ್ಲಿಂ ಐಕ್ಯತೆಗೆ ಶ್ರಮಿಸಿದರು. ಅವರು ಎಲ್ಲಾ ಸಾಮಾಜಿಕ ಅನಿಷ್ಟ ಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಅವರ ಪತ್ನಿ ಕಸ್ತೂರ್ಬಾ ಅವರೊಂದಿಗೆ ಮಹಿಳೆಯರ  ಸಬಲೀಕರಣಕ್ಕಾಗಿ ಕೆಲಸ  ಮಾಡಿದರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು.  ಅವರು ರೈತರ ಬಗ್ಗೆಯೂ ಕಾಳಜಿ  ಹೊಂದಿದ್ದರು. ಆದ್ದರಿಂದ ಅವರು, ತಮ್ಮ  ಜೀವನದುದ್ದಕ್ಕೂ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು.  ಅವರ ತತ್ವಗಳು ಮತ್ತು ಮೌಲ್ಯಗಳು ಇನ್ನೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ,  ಮತ್ತು ಜನರು ಅದನ್ನು ಅನುಸರಿಸಲು, ಸರಿಯಾದ  ಮಾರ್ಗವೆಂದು ಪರಿಗಣಿಸುತ್ತಾರೆ. ಅವರ ಆಲೋಚನೆಗಳನ್ನು, ಅವರ ಅನೇಕ ಶಿಷ್ಯರು, ಸಾಹಿತ್ಯ ಲೇಖಕರು ಮತ್ತು ಕಲಾವಿದರು ಹರಡಿದರು. 

ಜನವರಿ 30, 1948 ರಂದು ಅವರು  ನಾಥೂರಾಮ್ ಗೋಡ್ಸೆಯಿಂದ 78ನೇ ವಯಸ್ಸಿನಲ್ಲಿ ಹತ್ಯೆಯಾದರು.  ರಾಜ್ ಘಾಟ್ ಎಂದು  ಹೆಸರಿಸಲಾದ ಅವರ ಸಮಾಧಿಯು ದೆಹಲಿಯಲ್ಲಿದೆ. ಅವರು ನಮ್ಮೊಂದಿಗಿಲ್ಲ ಆದರೆ, ಅವರ ಬೆಳಕು ಮತ್ತು ಮಾರ್ಗದರ್ಶನ ಅಮರವಾಗಿದೆ. “ಹೇ ರಾಮ್” ಎಂಬುದು ಅವರ ಕೊನೆಯ ಮಾತುಗಳು ಮತ್ತು “ನನ್ನ ಜೀವನವೇ ನನ್ನ ಸಂದೇಶ” ಎಂಬುದು ಅವರ ಧ್ಯೇಯ ವಾಕ್ಯವಾಗಿತ್ತು. 

ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಇತರ ಜನರು ಗಾಂಧಿ ಜಯಂತಿಯಂದು ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲು ರಾಜ್ ಘಾಟ್ ಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಅವರ ನೆಚ್ಚಿನ ಹಾಡು, ರಘುಪತಿ ರಾಘವ ರಾಜ ರಾಮ್ ಅನ್ನು ವಿಶ್ವದಾದ್ಯಂತ ಮಾಡಲಾಗುತ್ತದೆ. ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಛೇರಿಗಳು ಮತ್ತು ಇತರ ಸಂಸ್ಥೆಗಳು, ಈ ದಿನ ಮುಚ್ಚಲ್ಪಡುತ್ತವೆ.  ಗಾಂಧೀಜಿಯವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಭಾಷಣ ಸ್ಪರ್ಧೆಗಳು, ಪ್ರಬಂಧ ಬರಹ,ನಾಟಕ ಮುಂತಾದ ವಿವಿಧ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತವೆ.

ಅವರು ತಮ್ಮ ಕಾರ್ಯಗಳ ಮೂಲಕ ಅಹಿಂಸೆಯನ್ನು ಅನುಸರಿಸಿದರು ಮತ್ತು ಸಕ್ರಿಯವಾಗಿ ಬೋಧಿಸಿದರು. ಅವರು ಪ್ರಾಮಾಣಿಕ ಮತ್ತು ಸತ್ಯವಾದ ಜೀವನವನ್ನು ನಡೆಸಲು ಮತ್ತು ಸದ್ಗುಣಗಳ ಶಕ್ತಿಯನ್ನು ನಂಬಲು ಭಾರತೀಯರು ಮತ್ತು ಪ್ರಪಂಚದಾದ್ಯಂತ ಜನರನ್ನು ಇನ್ನು ಪ್ರೇರೇಪಿಸುವ ಮಹಾನ್ ವ್ಯಕ್ತಿ. ಇಂದು ನಾವು ನಮ್ಮ ಜೀವನವನ್ನು ನಡೆಸುತ್ತಿರುವಾಗ ಯಾವುದೇ ಪೂರ್ವ ಗ್ರಹವಿಲ್ಲದೆ ಜನರನ್ನು ಗೌರವ ಮತ್ತು ಸಮಾನತೆಯಿಂದ ನಡೆಸಿಕೊಳ್ಳುವ ಮೂಲಕ ಮತ್ತು ನಮ್ಮ ಕೆಟ್ಟದರಲ್ಲಿಯೂ ಹಿಂಸೆಗೆ ಅನುಗುಣವಾಗಿರದೆ, ಅವರ ತತ್ವವನ್ನು ನೆನಪಿಸಿಕೊಳ್ಳೋಣ ಮತ್ತು ಗೌರವಿಸೋಣ. ನಮ್ಮ ಬಾಪು ಹೇಳಿಕೊಟ್ಟ ಅಹಿಂಸೆಯ ಮಾರ್ಗದಲ್ಲಿ ಸಾಗಿ, ನೆಮ್ಮದಿಯ ಜೀವನ ನಡೆಸೋಣ.

 ಜೈ ಹಿಂದ್! 

ಗಾಂಧಿ ಜಯಂತಿಯ ಭಾಷಣ, 10 ಸಾಲುಗಳಲ್ಲಿ.

  1.  ಮಹಾತ್ಮ ಗಾಂಧಿಯವರ ಜನ್ಮ ದಿನದಂದು ಪ್ರತಿವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
  2. ವಿಶ್ವಸಂಸ್ಥೆಯು ಅಕ್ಟೋಬರ್ 2ನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು.
  3. ಇದು ನಮ್ಮ ದೇಶದ ಅಧಿಕೃತವಾಗಿ ಘೋಷಿಸಲಾದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ, 
  4. ಪ್ರಪಂಚದಾದ್ಯಂತ ಜನರು ಈ ದಿನದಂದು ಮಹಾತ್ಮ ಗಾಂಧಿಯವರಿಗೆ, ಗೌರವ ಸಲ್ಲಿಸುತ್ತಾರೆ ಮತ್ತು ಅವರ ಬೋಧನೆಗಳನ್ನು ಅನುಸರಿಸಲು  ಪ್ರತಿಜ್ಞೆ ಮಾಡುತ್ತಾರೆ.
  5. ಜನರು ಮಹಾತ್ಮ ಗಾಂಧಿಯವರ ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ಭಾರತದಾದ್ಯಂತ ಹೂಗಳು ಮತ್ತು ಹೂ ಮಾಲೆಗಳಿಂದ ಅಲಂಕರಿಸುತ್ತಾರೆ.
  6. ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ರಾಜಕೀಯ ಪಕ್ಷಗಳು ಮತ್ತು ಜನರು ರಾಜ್ ಘಾಟ್ ಸ್ಮಾರಕದ ಬಳಿ ಸೇರುತ್ತಾರೆ.
  7. ಅನೇಕ ಶಾಲೆಗಳು ಮತ್ತು ಕಾಲೇಜುಗಳು ಮಹಾತ್ಮ ಗಾಂಧಿಯವರ ಬೋಧನೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಹಂಚಿಕೊಳ್ಳಲು, ಭಾಷಣ ಸ್ಪರ್ಧೆಗಳು, ನಾಟಕಗಳು,ಪ್ರಬಂಧ ಸ್ಪರ್ಧೆ  ಇತ್ಯಾದಿಗಳನ್ನು ನಡೆಸುತ್ತವೆ.
  8.  ಮಹಾತ್ಮಾ ಗಾಂಧಿಯವರು, ಅಹಿಂಸೆ ಮತ್ತು ಶಾಂತಿಯ ಹರಿಕಾರರಾಗಿದ್ದರು.
  9. . ಮಹಾತ್ಮ ಗಾಂಧಿಯವರು ಯಾವಾಗಲೂ ಮಧ್ಯಪಾನ, ಧೂಮಪಾನ ಮತ್ತು ಇತರೆ ಕೆಟ್ಟ ಅಭ್ಯಾಸಗಳ ವಿರುದ್ಧವಾಗಿದ್ದರು.
  10. ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಅವರ ಸಿದ್ದಾಂತವನ್ನು ತಿಳಿದುಕೊಳ್ಳಲು ಇದು ಅತ್ಯುತ್ತಮ ದಿನವಾಗಿದೆ. 

FAQ

ಪ್ರಶ್ನೆ1-  ಗಾಂಧಿ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ-  ಗಾಂಧಿ ಜಯಂತಿಯನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ.

ಪ್ರಶ್ನೆ2- 2023 ರಲ್ಲಿ  ಗಾಂಧೀಜಿಯವರ ಎಷ್ಟನೇ ಜನ್ಮ ದಿನವನ್ನು ಆಚರಿಸಲಾಗುತ್ತಿದೆ?

ಉತ್ತರ- 2023 ರಲ್ಲಿ ಗಾಂಧೀಜಿಯವರ  154ನೇ  ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಪ್ರಶ್ನೆ3-. ಗಾಂಧೀಜಿಯವರು ಯಾವಾಗ ನಿಧನರಾದರು?

ಉತ್ತರ-  ಗಾಂಧೀಜಿಯವರು  ಜನವರಿ 30, 1948ರಂದು ನಿಧನರಾದರು.

ಪ್ರಶ್ನೆ4- ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ- ಅಕ್ಟೋಬರ್ 2ನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಶ್ನೆ5-  ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದವರು ಯಾರು? 

ಉತ್ತರ- ಮಹಾತ್ಮ  ಗಾಂಧಿಯವರನ್ನು  ಹತ್ಯೆ ಮಾಡಿದವರು  ನಾಥುರಾಮ್ ಗೋಡ್ಸೆ. 

ಇನ್ನಷ್ಟು ಓದಿ

ಮಹಾತ್ಮ ಗಾಂಧಿಯವರ ಜೀವನ ಚರಿತ್ರೆ

ಗಾಂಧಿ ಜಯಂತಿ ಪ್ರಬಂಧ 

ಭಾರತದ ಸ್ವಾತಂತ್ರ ಹೋರಾಟದಲ್ಲಿ  ಗಾಂಧೀಜಿಯವರ ಪಾತ್ರ 

Leave a Comment